ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರ್ಕಾರ ಬಲಗೊಳಿಸಿದೆ : ಸಚಿವ ಜೆ.ಸಿ.ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.24- ಲೋಕಾಯುಕ್ತದಲ್ಲಿನ ಪ್ರಕರಣಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಮಾಡದಿದ್ದರೆ ಪ್ರತಿವಾದಿಗಳು ಹೈಕೋರ್ಟ್ ಮೊರೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.

ವಿಧಾನಸಭೆಯಿಂದ ಅಂಗೀಕಾರದೊಂಡ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕದ ಮೇಲೆ ವಿಧಾನ ಪರಿಷತ್‍ನಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ಲೋಕಾಯುಕ್ತ ಸಂಸ್ಥೆಯನ್ನು ನಮ್ಮ ಸರ್ಕಾರ ಬಲಗೊಳಿಸಿದೆ. ಅಲ್ಲಿ ಒಬ್ಬರು ನ್ಯಾಯಾಧೀಶರು ನಿವೃತ್ತರಾಗಿದ್ದರು. ಅದಕ್ಕೆ ತಕ್ಷಣ ಮತ್ತೊಬ್ಬರು ನೇಮಿಸಲಾಗಿದೆ. ಇಬ್ಬರು ನ್ಯಾಯಾಧೀಶರು ಮತ್ತು ಅದಕ್ಕೆ ಅಗತ್ಯವಾದ ಸಿಬ್ಬಂದಿಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಲೋಕಾಯುಕ್ತದಲ್ಲಿ ಪ್ರಕರಣಗಳ ವಿಚಾರಣೆ ನಡೆಯಲು ಯಾವುದೇ ಅಡಚಣೆಗಳಿಲ್ಲ. ಒಂದು ವೇಳೆ ನಿಗದಿತ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡದಿದ್ದರೆ ತೊಂದರೆಗೆ ಒಳಗಾದವರು ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದಕ್ಕೂ ಮೊದಲು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಸದಸ್ಯರು, ಬಿಜೆಪಿ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದು ಮಾಡಿ ಲೋಕಾಯುಕ್ತವನ್ನು ಬಲ ಪಡಿಸುವುದಾಗಿ ಚುನಾವಣೆ ವೇಳೆ ಭರವಸೆ ನೀಡಿತ್ತು. ಆದರೆ ಈವರೆಗೂ ಅದು ಆಗಿಲ್ಲ. ಲೋಕಾಯುಕ್ತ ಮತ್ತಷ್ಟು ಬಲ ಹೀನವಾಗುತ್ತಿದೆ ಎಂದು ಆಕ್ಷೇಪಿಸಿದರು.

ಅಲ್ಲಿಗೆ ಬೇಕಾದ ಸಿಬ್ಬಂದಿ ಮತ್ತು ನ್ಯಾಯಾದೀಶರನ್ನು ನೇಮಿಸಿಲ್ಲ. ಲೋಕಾಯುಕ್ತ ಈಗ ಹಲ್ಲಿಲ್ಲದ ಹಾವಾಗಿದೆ ಎಂದು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿದ ಮಾಧುಸ್ವಾಮಿ ಅವರು, ನಮ್ಮ ಸರ್ಕಾರ ಲೋಕಾಯುಕ್ತವನ್ನು ನಿರ್ಲಕ್ಷ್ಯಿಸಿಲ್ಲ ಎಂದು ಸ್ಪಷ್ಟ ಪಡಿಸಿದರು.

Facebook Comments