ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಕನ್ನಡಿಗರ ನೇಮಕ : ಸಚಿವ ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ. 1- ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಇಲಾಖೆಯಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಕನ್ನಡದ ಮಕ್ಕಳನ್ನೇ ನೇಮಕ ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಕನ್ನಡ ನಾಡು-ನುಡಿ, ಸೇವೆ ಮತ್ತು ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಇಲಾಖೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡದ ಮಕ್ಕಳಿಗೆ ನೀಡುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.  ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ 64ನೆ ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಕನ್ನಡ ನಾಡು ಆರೋಗ್ಯಕರವಾಗಿರಬೇಕು, ಸ್ವತಂತ್ರವಾಗಿರಬೇಕು ಎಂಬುದು ಸರ್ಕಾರ ಮೂಲ ಉದ್ದೇಶ ಎಂದು ಹೇಳಿದರು. ಜವಳಿ ಉದ್ಯಮ, ರೇಷ್ಮೆ, ಉಣ್ಣೆ ಕೆಲಸ ಮಾಡುವವರಿಗೂ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೊರತುಪಡಿಸಿ ಬೇರೆ ಎಲ್ಲಾದರೂ ಮೂಲ ಕಸುಬು ಜವಳಿ, ರೇಷ್ಮೆ, ಉಣ್ಣೆ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

ಈ ಉದ್ಯಮಗಳಲ್ಲಿ ತೊಡಗುವವರಿಗೆ ವಿದ್ಯುತ್, ಭೂ ಖರೀದಿಯಲ್ಲಿ ಸಬ್ಸಿಡಿ ನೀಡಲು ಸಹ ಸರ್ಕಾರ ತೀರ್ಮಾನಿಸಿದೆ ಎಂದು ಅವರು ಹೇಳಿದರು.  ರಾಜ್ಯದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಇಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿಯಾಗಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸಮಾನ ಭಾವನೆ ಬಂದರೆ ಮಾತ್ರ ನಾವೆಲ್ಲರೂ ಅಭಿವೃದ್ಧಿಶೀಲರು ಎಂದು ಭಾವಿಸಬಹುದು ಎಂದರು.

ಪ್ರತಿಯೊಬ್ಬ ವ್ಯಕ್ತಿಯನ್ನು ಸಮರ್ಥರನ್ನಾಗಿಸಲು, ಶೈಕ್ಷಣಿಕವಾಗಿ ಶಕ್ತಿ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.  ತುಮಕೂರು ಜಿಲ್ಲಾಯ ಎಲ್ಲ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಮೊದಲ ಹಂತವಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಲು 250 ಕೋಟಿ ರೂ.ಗಳ ಯೋಜನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ಜತೆಗೆ ತುಮಕೂರು ನಗರದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಘಟಕ ಸ್ಥಾಪನೆಗೂ ಅನುಮೋದನೆ ಪಡೆಯಲಾಗಿದೆ ಎಂದರು.

ಪ್ರತಿಯೊಬ್ಬರೂ ಸ್ವಚ್ಚತೆಗೆ ಒತ್ತು ನೀಡಿ ಗಾಂಧೀಜಿಯವರ ಸ್ವಚ್ಚ ಭಾರತ್ ಕನಸನ್ನು ನನಸು ಮಾಡಬೇಕಾಗಿದೆ. ಆ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡೋಣ ಎಂದರು.  ಅನೇಕ ಸಾಹಿತಿಗಳು, ಕಲಾವಿದರು, ಹೋರಾಟಗಾರರ ಶ್ರಮದ ಫಲದಿಂದ ಕನ್ನಡನಾಡನ್ನು ಶೇ.80 ರಿಂದ 90ರಷ್ಟು ಒಂದುಗೂಡಿಸಿಕೊಂಡು ನಾವೆಲ್ಲರೂ ಇಂದು ಸಂತಸದಿಂದ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಕನ್ನಡ ನಾಡು-ನುಡಿ ಅಭಿವೃದ್ಧಿಗೆ ಬದ್ಧರಾಗಿ ಶ್ರಮಿಸೋಣ ಎಂದು ಅವರು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಪಾಲಿಕೆ ಮೇಯರ್ ಲಲಿತಾ ರವೀಶ್, ಉಪಮೇಯರ್ ರೂಪಶ್ರೀ, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್, ಜಿಪಂ ಸಿಇಒ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ, ಪಾಲಿಕೆ ಆಯುಕ್ತ ಶಿವಕುಮಾರ್, ಡಿಡಿಪಿಐ ಕಾಮಾಕ್ಷಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Facebook Comments