ಜೆಡಿಎಸ್ ಚಿತ್ತ ಉತ್ತರ ಕರ್ನಾಟಕ ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮಾ,7- ಮಾಜಿ ಪ್ರಧಾನಿ, ಜಾತ್ಯಾತೀತ ಜನತಾದಳ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರು ಈಗ ಉತ್ತರ ಕರ್ನಾಟಕದತ್ತ ತಮ್ಮ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದಾರೆ.  ಬೆಂಗಳೂರು ಶಕ್ತಿ ಕೇಂದ್ರವಾಗಿದ್ದರೂ, ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಭಾವ ಹೊಂದಿದ್ದರೂ ರಾಜ್ಯದ ಚುಕ್ಕಾಣಿ ಹಿಡಿಯಲು ಉತ್ತರ ಕರ್ನಾಟಕ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆದ್ದರಿಂದ ಇದನ್ನು ಮನಗಂಡ ಜೆಡಿಎಸ್ ನಾಯಕರು ಈಗ ಉತ್ತರ ಕರ್ನಾಟಕದತ್ತ ಮುಖ ಮಾಡಿದ್ದಾರೆ.

ಮುಂಬರುವ 2023ರ ಚುನಾವಣೆಯಲ್ಲಿ ಹೇಗಾದರೂ ಮಾಡಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲು ಈಗಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗಿದ್ದು ಕಾರ್ಯಕರ್ತರಲ್ಲಿ ಒಂದು ಹೊಸ ಚೈತನ್ಯ ಮೂಡಿಸಿದೆ. ಮುಂಬೈ ಕರ್ನಾಟಕದ ಏಳು ಜಿಲ್ಲಾಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಕುರಿತು ತರಬೇತಿ ಕಾರ್ಯಾಗಾರವನ್ನು ಇಂದು ಮತ್ತು 8ರಂದು ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರೇ ನಡೆಸುತ್ತಿದ್ದಾರೆ.

ಸಂಘಟನೆ, ನಾಯಕತ್ವದ ಕೊರತೆಯಿಂದ ಕಂಗೆಟ್ಟಿರುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿ ಪಕ್ಷಕ್ಕೆ ಪುನಶ್ಚೇತನ ನೀಡುವ ಉದ್ದಾಶದಿಂದ ಈ ಕಾರ್ಯಾಗಾರ ನಡೆಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಗಟ್ಟಿನೆಲೆ ಎಂಬುದೇ ಇಲ್ಲ. ಈ ಭಾಗದಿಂದ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವಂತಾಗಲಿ ಎಂಬ ಉದ್ದಾಶದಿಂದ ಆಗ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಾ ಮನೆ ಮಾಡಿದ್ದರು. ಇಲ್ಲಿಂದಲೇ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಏನೆಲ್ಲ ಕಸರತ್ತು ಮಾಡಿದರೂ ವಿಧಾನಸಭೆ ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಲಾಭವೇನು ಆಗಲಿಲ್ಲ.

ವಿಜಯಪುರದಲ್ಲಿ 2, ಬೀದರ್‍ನಲ್ಲಿ ಒಂದು, ರಾಯಚೂರಿನಲ್ಲಿ 2 ಸ್ಥಾನಗಳನ್ನು ಮಾತ್ರ ಜೆಡಿಎಸ್ ಗೆದ್ದಿತ್ತು. ಆದರೆ, ಇಷ್ಟೆ ಸ್ಥಾನಗಳನ್ನು ತಂದುಕೊಟ್ಟರೂ ಕುಮಾರಸ್ವಾಮಿ ಮುಖ್ಯಮಂತ್ರಿ ಗದ್ದುಗೆ ಏರಿದ್ದಂತೂ ಸುಳ್ಳಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದಿಲ್ಲ. ಈ ಪಕ್ಷ ಬರೀ ಹಳೆ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ.
ಕುಮಾರಸ್ವಾಮಿ ಅವರು ಸಿಎಂ ಆದಾಗ ಮಾಡಿದ ಜನಪರ ಕಾರ್ಯ ಮುಂದಿಟ್ಟುಕೊಂಡು ಪಕ್ಷದ ಸಂಘಟನೆಗೆ ಮುಂದಾಗಿರುವ ನಾಯಕರಿಗೆ ಅನೇಕ ಸವಾಲುಗಳು ಎದರಾಗಿವೆ.

ಪಕ್ಷ ಸಂಘಟನೆಯಿಲ್ಲದೆ ಕಂಗಾಲಾಗಿರುವ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲು ಹಾಗೂ ಪಕ್ಷವನ್ನು ಯಾವ ರೀತಿ ಬೇರು ಮಟ್ಟದಿಂದ ಬೆಳೆಸಬೇಕು ಎಂಬ ತಂತ್ರಗಾರಿಕೆ ರೂಪಿಸಲು, ಮುಖಂಡರಿಗೆ ತರಬೇತಿ ನೀಡಲು ಹುಬ್ಬಳ್ಳಿಯಲ್ಲಿ ಎರಡು ದಿನಗಳ ತರಬೇತಿ ಕಾರ್ಯಾಗಾರ ನಡೆಯುತ್ತಿದೆ. ಸದ್ಯ ಬರಲಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಉದ್ದಾಶ ಜೆಡಿಎಸ್‍ನದ್ದು. ಇದರೊಂದಿಗೆ ಆಗಾಗ ಈ ಭಾಗಕ್ಕೆ ಬಂದರೆ ಉತ್ತರ ಕರ್ನಾಟಕದ ವಿರೋಧಿ ಎಂಬ ಹಣೆಪಟ್ಟಿಯಿಂದಲೂ ಕಳಚಿಕೊಳ್ಳಬಹುದು ಎಂಬ ಇರಾದೆ ಗೌಡರದ್ದು ಎಂಬ ಮಾತು ಪಕ್ಷದಿಂದಲೇ ಕೇಳಿ ಬರುತ್ತಿವೆ.

2012ರಲ್ಲಿ ಗುಜರಾತ್ ವಿಧಾನಸಭೆ ಹಾಗೂ 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯ ರಾಜಕೀಯ ಸಲಹೆಗಾರರ ಕೆಲಸ ಮಾಡಿ ಆ ಪಕ್ಷವನ್ನು ಅಧಿಕಾರದ ಗದ್ದುಗೆಗೆ ತೆಗೆದುಕೊಂಡು ಹೋದ ಪ್ರಶಾಂತ ಕಿಶೋರ್ ಅವರನ್ನು ಇತ್ತೀಚೆಗೆ ಕುಮಾರಸ್ವಾಮಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಚರ್ಚೆಯ ವೇಳೆ ಪಕ್ಷ ಸಂಘಟನೆ ಕುರಿತಂತೆ ಕುಮಾರಸ್ವಾಮಿ ಅವರು ಪ್ರಶಾಂತ ಕಿಶೋರ್ ಅವರಿಂದ ಸಲಹೆ ಪಡೆದಿದ್ದಾರೆ ಎಂಬೆಲ್ಲ ಮಾತು ರಾಜಕೀಯದಲ್ಲಿ ಹಬ್ಬಿತ್ತು. ಇದಾಗಿ ಹದಿನೈದು ದಿನಗಳೊಳಗೆ ಹುಬ್ಬಳ್ಳಿಯಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಿರುವುದು ಚರ್ಚೆಗೆ ಇನ್ನಷ್ಟು ಇಂಬು ನೀಡಿದೆ.

Facebook Comments