ವಿಧಾನ ಪರಿಷತ್ ಚುನಾವಣೆ : ಕುಪೇಂದ್ರರೆಡ್ಡಿ, ಗೋವಿಂದರಾಜು ನಡುವೆ ಜೆಡಿಎಸ್ ಟಿಕೆಟ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.17- ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ಜೂ.29ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅಥವಾ ಕೋಲಾರದ ಗೋವಿಂದರಾಜು ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.

ನಾಮಪತ್ರ ಸಲ್ಲಿಸಲು ನಾಳೆಯೇ ಕಡೆ ದಿನವಾಗಿರುವುದರಿಂದ ಇಂದು ಸಂಜೆ ವೇಳೆಗೆ ಪಕ್ಷದ ಅಭ್ಯರ್ಥಿ ಹೆಸರು ಪ್ರಕಟಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಹಲವು ಆಕಾಂಕ್ಷಿಗಳೊಂದಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಮಾಲೋಚಿಸಿ ಒಮ್ಮತ ಅಭ್ಯರ್ಥಿ ಆಯ್ಕೆ ಮಾಡುವ ಕಸರತ್ತು ನಡೆಸಿದ್ದಾರೆ. ಕುಪೇಂದ್ರರೆಡ್ಡಿ ಹಾಗೂ ಉದ್ಯಮಿ ಗೋವಿಂದರಾಜು ಅವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಪ್ರಬಲ ಆಕಾಂಕ್ಷಿಯಾಗಿದ್ದು, ಮತ್ತೊಂದು ಅವಧಿಗೆ ಅವಕಾಶ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದರು. ಪರಿಷತ್ ಒಂದು ಸದಸ್ಯ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದುದ್ದರಿಂದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಅಧಿಕಾರವನ್ನು ಗೌಡರಿಗೆ ನೀಡಲಾಗಿತ್ತು.

ಉತ್ತರ ಕರ್ನಾಟದ ಭಾಗಕ್ಕೆ ಅವಕಾಶ ನೀಡಬೇಕೆಂಬ ಒತ್ತಡವೂ ವರಿಷ್ಠರ ಮೇಲಿದೆ. ಪಕ್ಷದ ಮುಖಂಡರೊಂದಿಗೆ ಸಮಾಲೋಚಿಸಿ ಗೌಡರು ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೋಲಾರ ಜಿಲ್ಲೆಯ ಪಕ್ಷದ ಶಾಸಕರು ಹಾಗೂ ಮುಖಂಡರು ನಿನ್ನೆ ಗೌಡರನ್ನು ಭೇಟಿ ಮಾಡಿ ಗೋವಿಂದರಾಜು ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ತಂದಿದ್ದಾರೆ.

ರಾಜ್ಯಸಭೆ ಸದಸ್ಯ ಸ್ಥಾನದಿಂದ ನಿವೃತ್ತಿಯಾಗುತ್ತಿರುವ ಕುಪೇಂದ್ರರೆಡ್ಡಿ ಅವರಿಗೆ ಟಿಕೆಟ್ ನೀಡುತ್ತಾರೋ ಅಥವಾ ಹೊಸಬರಿಗೆ ಮಣೆ ಹಾಕಿ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುತ್ತಾರೆಯೋ ಕಾದು ನೋಡಬೇಕಿದೆ.

Facebook Comments