ಅಧಿವೇಶನಕ್ಕೂ ಮುನ್ನ ಜೆಡಿಎಸ್ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.18-ಕೋವಿಡ್-19, ಎಪಿಎಂಸಿ ಹಾಗೂ ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಕೈಗಾರಿಕಾ ನೀತಿ ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಲು ಜೆಡಿಎಸ್ ತೀರ್ಮಾನಿಸಿದೆ.

ನೆರೆ ಹಾವಳಿ, ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟು ಮೊದಲಾದ ವಿಷಯಗಳನ್ನು ಆದ್ಯತೆ ಮೇಲೆ ಅಧಿವೇಶನದಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಅಧಿವೇಶನಕ್ಕೂ ಮುನ್ನ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಧಿವೇಶನದಲ್ಲಿ ಪಕ್ಷ ಪ್ರಸ್ತಾಪಿಸಬೇಕಾಗಿರುವ ವಿಚಾರಗಳ ಬಗ್ಗೆ ಚರ್ಚಿಸಿ ಪಕ್ಷದ ವರಿಷ್ಟರು ನಿರ್ಧಾರ ಕೈಗೊಳ್ಳಲಿದ್ದಾರೆ.

ಶಾಸಕರಿಗೆ ಯಾವ ಯಾವ ವಿಚಾರದ ಮೇಲೆ ಬೆಳಕು ಚೆಲ್ಲಬೇಕು ಎಂಬ ಮಾರ್ಗದರ್ಶನವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಭೂಸುಧಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದು ರೈತರಿಗೆ ಮಾರಕವಾಗಿದೆ ಎಂದು ಆರೋಪಿಸಿ ಈಗಾಗಲೇ ಪ್ರತಿಭಟನೆ ನಡೆಸಿದೆ.

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಪರಿಹಾರ ಕಾರ್ಯದ ವಿಳಂಬ, ಕೊರೊನಾ ನಿರ್ವಹಣೆಯ ವೈಫಲ್ಯ ಸೇರಿದಂತೆ ಹಲವು ಜನಪರ ಹಾಗೂ ರೈತಪರ ವಿಚಾರಗಳಿಗೆ ಒತ್ತು ನೀಡಿ ಅಧಿವೇಶನದಲ್ಲಿ ಪ್ರಸ್ತಾಪಿಸಲು ಜೆಡಿಎಸ್ ಮುಂದಾಗಿದೆ.

ಕೋವಿಡ್‍ನಿಂದಾಗಿ ಉಂಟಾಗಿರುವ ನಿರುದ್ಯೋಗ ಸಮಸ್ಯೆ, ಕಾರ್ಮಿಕರು, ಶಿಕ್ಷಕರು ಹಾಗೂ ಜನರು ಎದುರಿಸುತ್ತಿರುವ ಸಂಕಷ್ಟದ ವಿಚಾರಗಳಿಗೆ ಆದ್ಯತೆ ನೀಡಲಿದೆ. ಪ್ರತಿಪಕ್ಷವಾದ ಕಾಂಗ್ರೆಸ್ ಪ್ರಸ್ತಾಪಿಸಲಿರುವ ಡ್ರಗ್ಸ್ ದಂಧೆ, ಡಿ.ಜೆ.ಹಳ್ಳಿ ಘಟನೆ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆಯು ಜೆಡಿಎಸ್ ಜೊತೆಗೂಡುವ ಸಾಧ್ಯತೆಗಳಿವೆ.

ಆನೆ ಸೇರಿದಂತೆ ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಹಾನಿ, ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾಗಿರುವ ಬೆಳೆ ಹಾನಿ, ಬಡವರಿಗೆ ಮನೆ ನಿರ್ಮಾಣ ಮಾಡುವ ವಿಚಾರ, ಕೋವಿಡ್‍ನಿಂದಾಗಿ ಉಂಟಾಗಿರುವ ಆರ್ಥಿಕ ಸಮಸ್ಯೆಗಳ ಮೇಲೆ ಉಭಯ ಸದನಗಳಲ್ಲಿ ಬೆಳಕು ಚೆಲ್ಲಲು ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕೈಗಾರಿಕಾ ನೀತಿಯಿಂದ ಕಾರ್ಮಿಕರಿಗಾಗುವ ತೊಂದರೆ, ಕೋವಿಡ್ ನಿಂದಾಗಿ ವಲಸೆ ಕಾರ್ಮಿಕರು ಕೆಲಸ ಕಳೆದುಕೊಂಡಿರುವುದು, ಕೊರೊನಾ ಸಾಂಕ್ರಾಮಿಕ ರೋಗ ಹರಡಂತೆ ತಡೆಯಲು ವಿಫಲವಾಗಿರುವುದು ಸೇರಿದಂತೆ ಹಲವು ಜನಪರ ವಿಚಾರಗಳನ್ನು ಆದ್ಯತೆ ಮೇಲೆ ಪ್ರಸ್ತಾಪಿಸಿ ಸರ್ಕಾರದಿಂದ ಸೂಕ್ತ ಉತ್ತರ ಪಡೆಯುವ ಪ್ರಯತ್ನ ಮಾಡಲಿದೆ ಎಂದು ಮೂಲಗಳು ಹೇಳಿವೆ.

Facebook Comments