ಉಪಚುನಾವಣೆ ಸೋಲಿನ ಬಳಿಕ ಜೆಡಿಎಸ್‌ಗೆ ಮತ್ತೊಂದು ಹಿನ್ನಡೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12- ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಿಂದ ಜೆಡಿಎಸ್ ಬಹುತೇಕ ದೂರ ಉಳಿಯುವ ಸಾಧ್ಯತೆಗಳಿವೆ. ನಿನ್ನೆಯಿಂದ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 18ರ ವರೆಗೂ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶವಿದೆ. ಸಂಖ್ಯಾಬಲದ ಕೊರತೆ ಇರುವ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸದಿರುವ ಬಗ್ಗೆ ಜೆಡಿಎಸ್ ನಿಲುವು ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಭಾರತದ ಚುನಾವಣಾ ಆಯೋಗ ಚುನಾವಣೆ ನಡೆಸಲು ವೇಳಾಪಟ್ಟಿ ಘೋಷಣೆ ಮಾಡಿದ್ದು, ಈಗಾಗಲೇ ಅಧಿಸೂಚನೆ ಹೊರಬಿದ್ದಿದೆ.  ಕಾಂಗ್ರೆಸ್ ಸ್ಪರ್ಧೆಗೆ ಮುಂದಾಗಿ ಜೆಡಿಎಸ್ ಬೆಂಬಲ ಕೋರಿದರೆ ಆಗ ಪರಿಶೀಲನೆ ಮಾಡಬಹುದು ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸದ್ಯಕ್ಕೆ ರಾಜ್ಯಸಭೆ ಚುನಾವಣೆ ಸ್ಪರ್ಧೆ ವಿಚಾರ ಕುರಿತಂತೆ ಪಕ್ಷದ ವೇದಿಕೆಯಲ್ಲಿ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ವಾರ ಕಾಲಾವಕಾಶವಿರುವುದರಿಂದ ವರಿಷ್ಠರು ಯಾವ ನಿಲುವು ತಳೆಯುತ್ತಾರೋ ಕಾದು ನೋಡಬೇಕಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ವಿಧಾನಸಭೆ ಉಪಚುನಾವಣೆ ಹಾಗೂ ವಿಧಾನ ಪರಿಷತ್‍ನ ದ್ವೈ ವಾರ್ಷಿಕ ಚುನಾವಣೆಯಲ್ಲಿ ಪಕ್ಷ ಭಾರೀ ಹಿನ್ನಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ನಂತರ ಪಕ್ಷದ ವರಿಷ್ಠರು, ಮುಖಂಡರ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಲು ಜೆಡಿಎಸ್ ಉದ್ದೇಶಿಸಿದೆ.

ಎರಡು ವಿಧಾನಸಭೆ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಿತ್ತಾದರೂ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪಕ್ಷದ ನಾಯಕರು ಸಭೆ ಸೇರಿ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments