ಏಕಾಂಗಿ ಸ್ಪರ್ಧೆಗೆ ಜೆಡಿಎಸ್ ನಿರ್ಧಾರ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.24- ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ಕಾರಣ ಎಂಬ ಆರೋಪ ಮಾಡುತ್ತಿರುವ ಜೆಡಿಎಸ್ ಮುಂಬರುವ ವಿಧಾನಸಭೆ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧವಾಗಿದೆ.  ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಆಪ್ತ ಬೆಂಬಲಿಗರು ಕಾರಣ ಎಂಬ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಮೈತ್ರಿ ಸರ್ಕಾರ ಪತನವಾಗಲು ದೇವೇಗೌಡರು ಮತ್ತು ಅವರ ಮಕ್ಕಳೇ ಕಾರಣ ಎಂದು ಪ್ರತಿ ಆರೋಪ ಮಾಡಿದ್ದಾರೆ. ಉಭಯ ಪಕ್ಷಗಳ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರನ್ನು ಮುಂದುವರಿಸಲು ಕಾಂಗ್ರೆಸ್‍ನವರಿಗೆ ಇಷ್ಟವಿರಲಿಲ್ಲ ಎಂಬುದನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಜೆಡಿಎಸ್ ನಾಯಕರು ಮತ್ತು ಮುಖಂಡರು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಈಗಾಗಲೇ ನಡೆದಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಜೆಡಿಎಸ್ ಸ್ಪರ್ಧೆ ಮಾಡಿತ್ತು. ಮುಂದಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲೂ ಏಕಾಂಗಿಯಾಗಿ ಸ್ಪರ್ಧಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನೊಂದಿಗೆ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂಬ ಒತ್ತಡವನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷದ ವರಿಷ್ಠರ ಮೇಲೆ ಹೇರುತ್ತಿದ್ದಾರೆ.

ಇದರ ನಡುವೆಯೇ ದೇವೇಗೌಡರು ಸಿದ್ದರಾಮಯ್ಯ ಅವರ ಮೇಲೆ ಗಂಭೀರ ಆರೋಪ ಮಾಡಿರುವುದರಿಂದ ಮತ್ತೆ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಮುಂದುವರಿಯುವ ಸಾಧ್ಯತೆಗಳು ಇಲ್ಲ ಎಂದು ಹೇಳಲಾಗುತ್ತಿದೆ.

ಜೆಡಿಎಸ್ ಮೂಲಗಳ ಪ್ರಕಾರ, ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‍ನೊಂದಿಗೆ ಜೆಡಿಎಸ್ ಮೈತ್ರಿ ಮುಂದುವರಿಯುವುದಿಲ್ಲ. 14 ತಿಂಗಳ ಮೈತ್ರಿ ಸರ್ಕಾರಕ್ಕೆ ಅದು ಸೀಮಿತವಾಗಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡಿದ್ದರ ಫಲವಾಗಿ ಜೆಡಿಎಸ್‍ಗೆ ಹಿನ್ನಡೆಯಾಗಿದೆ. ಮತ್ತೆ ಆ ತಪ್ಪನ್ನು ಮಾಡಬಾರದು ಎಂಬ ನಿರ್ಧಾರಕ್ಕೆ ಜೆಡಿಎಸ್ ಮುಖಂಡರು ಬಂದಿದ್ದಾರೆ.

ಕಳೆದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಯಲ್ಲಿ ದೊರೆತ ಯಶಸ್ಸನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಯಲ್ಲಿ ಮೈತ್ರಿ ಮುಂದುವರಿಸಲಾಗಿತ್ತು. ಆದರೂ ನಿರೀಕ್ಷಿತ ಫಲಿತಾಂಶ ದೊರೆಯದೆ ಮುಖಭಂಗ ಅನುಭವಿಸುವಂತಾಯಿತು. ಅಲ್ಲದೆ, ಮೈತ್ರಿ ಮುಂದುವರಿಸುವ ಅನಿವಾರ್ಯತೆಯೂ ಇಲ್ಲ. ಸರ್ಕಾರ ಈಗಾಗಲೇ ಪತನವಾಗಿದೆ.  ಪಕ್ಷ ಸಂಘಟನೆ ದೃಷ್ಟಿಯಿಂದ ಏಕಾಂಗಿ ಸ್ಪರ್ಧೆಯೇ ಸೂಕ್ತ ಎಂಬ ನಿರ್ಧಾರಕ್ಕೂ ಬರಲಾಗಿದೆ.

ಸರ್ಕಾರ ಹಾಗೂ ಉಭಯ ಪಕ್ಷಗಳ ನಾಯಕರ ಮಟ್ಟದಲ್ಲಿ ಮೈತ್ರಿಯಾಗಿದ್ದರೂ ಕಾರ್ಯಕರ್ತರ ಮಟ್ಟದಲ್ಲಿ ಮೈತ್ರಿಯಾಗದೆ ಎರಡೂ ಪಕ್ಷಗಳು ಮುಜುಗರ ಪಡ ಬೇಕಾಯಿತಲ್ಲದೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸುವಂತಾ ಯಿತು.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳುವುದು ಬೇಡ ಎಂಬ ಒತ್ತಡ ಜೆಡಿಎಸ್‍ನಲ್ಲಿದೆ. ಸಿದ್ದರಾಮಯ್ಯ ಅವರು ಕೂಡ ಜೆಡಿಎಸ್‍ನೊಂದಿಗೆ ಮೈತ್ರಿ ಮುಂದುವರಿಸುವ ವಿಚಾರ ಕಾಂಗ್ರೆಸ್ ಹೈಕಮಾಂಡ್ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದ್ದಾರೆ. ದೇವೇಗೌಡರು ಸಹ ಕಾಂಗ್ರೆಸ್ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡುವುದಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ಬಗ್ಗೆ ಆರೋಪದ ಮೇಲೆ ಆರೋಪ ಮಾಡುತ್ತ ಬರುತ್ತಿರುವುದನ್ನು ಗಮನಿಸಿದರೆ ಮೈತ್ರಿ ಮುಂದುವರಿಸುವ ಲಕ್ಷಣಗಳು ಇದ್ದಂತಿಲ್ಲ. ಆದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಇತರ ನಾಯಕರು, ಜಾತ್ಯತೀತ ಪಕ್ಷಗಳು ಒಗ್ಗೂಡಬೇಕಾಗಿರುವ ಸಂದರ್ಭದಲ್ಲಿ ಉಭಯ ಪಕ್ಷಗಳ ನಡುವೆ ಒಡಕಿನ ಮಾತುಗಳು ಕೇಳಿಬರಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಮುರಿದು ಬೀಳುವುದೋ ಅಥವಾ ಮತ್ತೊಂದು ಸ್ವರೂಪದಲ್ಲಿ ಮುಂದುವರಿಯುವುದೋ ಎಂಬುದನ್ನು ಕಾದು ನೋಡಬೇಕು.

Facebook Comments