ಉಪ ಚುನಾವಣೆ ಎದುರಿಸಲು ಜೆಡಿಎಸ್ ಜಿಲ್ಲಾವಾರು ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.9-ಪಕ್ಷಸಂಘಟನೆ, ಮುಂಬರುವ ಚುನಾವಣೆ ಸಿದ್ಧತೆ, ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲು ಮುಂದಿನ ವಾರ ಮತ್ತೆ ಜೆಡಿಎಸ್ ಜಿಲ್ಲಾವಾರು ಸಭೆಗಳನ್ನು ನಡೆಸಲಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ 13 ಜಿಲ್ಲೆಗಳ ಸಭೆ ನಡೆಸಿದ ಜೆಡಿಎಸ್, ಸೆಪ್ಟೆಂಬರ್ 16 ರಿಂದ 20ರವರೆಗೆ ಮತ್ತೆ 17 ಜಿಲ್ಲೆಗಳ ಜಿಲ್ಲಾವಾರು ಸಭೆಗಳನ್ನು ನಡೆಸಲು ಉದ್ದೇಶಿಸಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾವಾರು ಪದಾಧಿಕಾರಿಗಳು, ಮುಖಂಡರು, ಮಾಜಿ ಸಚಿವರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಲೋಕಸಭೆ, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದು, ಪ್ರತಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ನೀಡಬೇಕಾದ ಆದ್ಯತೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಸ್ಥಳೀಯ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಅಗತ್ಯ ಬಿದ್ದರೆ ಜಿಲ್ಲಾಮಟ್ಟದ ಪದಾಧಿಕಾರಿಗಳ ಪುನರ್ ರಚನೆ ಮಾಡುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಜ್ಜುಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಳೇ ಮೈಸೂರು ಭಾಗದ 13 ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಮುಖಂಡರ ಸಭೆಯನ್ನು ಆಗಸ್ಟ್ ತಿಂಗಳಿನಲ್ಲಿ ದೇವೇಗೌಡರು ನಡೆಸಿದ್ದರು. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಮಳೆ ಹಾಗೂ ಪ್ರವಾಹ ಉಂಟಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲಾವಾರು ಸಭೆಗಳನ್ನು ಮುಂದೂಡಲಾಗಿತ್ತು.

ಸೆಪ್ಟೆಂಬರ್ 16ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, 17 ರಂದು ದಕ್ಷಿಣಕನ್ನಡ, ಉತ್ತರಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸೆ.18 ರಂದು ರಾಯಚೂರು, ಯಾದಗಿರಿ, ಕಲಬುರಗಿ, 19 ರಂದು ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, 20 ರಂದು ಹುಬ್ಬಳ್ಳಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಸಭೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments