ಜೆಡಿಎಸ್‍ನಿಂದ ವಾರದ ಕಾಲ ಜಿಲ್ಲಾವಾರು ಮುಖಂಡರ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.17- ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶದಿಂದ ನಿರಂತರವಾಗಿ ಸಭೆಗಳನ್ನು ನಡೆಸುತ್ತಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಒಂದು ವಾರದ ಕಾಲ ಜಿಲ್ಲಾವಾರು ಮುಖಂಡರ ಸಭೆ ನಡೆಸಲಿದ್ದಾರೆ.

ಆ.19ರಿಂದ ಆ.24ರ ವರೆಗೆ ಆರು ದಿನಗಳ ಕಾಲ ನಿರಂತರವಾಗಿ ಜಿಲ್ಲಾವಾರು ಮುಖಂಡರ ಸಭೆಗಳನ್ನು ಜೆಪಿ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದೆ.ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಪಕ್ಷ ಸಂಘಟನೆ ಬಗ್ಗೆ ಜಿಲ್ಲಾವಾರು ಮುಖಂಡರಿಂದ ಮಾಹಿತಿ ಪಡೆಯಲಾಗುತ್ತದೆ.

ಸ್ಥಳೀಯ ಪರಿಸ್ಥಿತಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪಕ್ಷವನ್ನು ಬಲಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿ ಅಗತ್ಯಬಿದ್ದರೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಲು ನಿರ್ಣಯಿಸಲಾಗುತ್ತದೆ.

ಚುನಾವಣೆ ಯಾವಾಗ ಬಂದರೂ ಪಕ್ಷ ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡುವ ಸಾಧ್ಯತೆಗಳಿವೆ. ಅಲ್ಲದೆ, ಆಡಳಿತಾರೂಢ ಬಿಜೆಪಿ ಸರ್ಕಾರದ ಆಡಳಿತ ವೈಖರಿ ಬಗ್ಗೆಯೂ ಸಮಾಲೋಚನೆ ನಡೆಸಿ ಪಕ್ಷ ಮುಂದೆ ಕೈಗೊಳ್ಳಬೇಕಾಗಿರುವ ಹೋರಾಟದ ರೂಪುರೇಷೆಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆ.19ರಂದು ಚಿಕ್ಕಬಳ್ಳಾಪುರ, ಕೋಲಾರ, 20ರಂದು ಮಂಡ್ಯ, ರಾಮನಗರ, 21ರಂದು ಚಾಮರಾಜನಗರ, ಮೈಸೂರು, 22ರಂದು ಚಿತ್ರದುರ್ಗ, ದಾವಣಗೆರೆ, 23ರಂದು ಬಳ್ಳಾರಿ, ಕೊಪ್ಪಳ, ಬೀದರ್, 24ರಂದು ತುಮಕೂರು, ಬೆಂಗಳೂರುನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಸಭೆ ನಡೆಯಲಿದೆ.

ಜಿಲ್ಲಾವಾರು ನಡೆಯುವ ಸಭೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರು, ಮಹಾ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಪಾಲ್ಗೊಳ್ಳಬೇಕು. ಆಯಾ ತಾಲ್ಲೂಕು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಮುಖಂಡರು, ಮಾಜಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು,

ಸಾರ್ವತ್ರಿಕ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳು ತಮ್ಮ ಜಿಲ್ಲೆಗೆ ಸಂಬಂಧಪಟ್ಟಂತೆ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಬೇಕೆಂದು ದೇವೇಗೌಡರು ಸೂಚಿಸಿದ್ದಾರೆ.

Facebook Comments

Sri Raghav

Admin