ದೇವೇಗೌಡರ ನೇತೃತ್ವದಲ್ಲಿ ನಾಳೆ ಬಿಬಿಎಂಪಿ ಚುನಾವಣೆ ಸಿದ್ಧತೆ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಮುಂಬರುವ ಬಿಬಿಎಂಪಿ ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ನಾಳೆ ಜೆಡಿಎಸ್ ಪೂರ್ವಭಾವಿ ಸಭೆ ನಡೆಯಲಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ನೇತೃತ್ವದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಜೆಪಿ ಭವನದಲ್ಲಿ ಸಭೆ ನಡೆಯಲಿದೆ.

ಕೋವಿಡ್ ಸಂಕಷ್ಟದ ಸಮಯಲ್ಲಿ ಪಕ್ಷ ಸಂಘಟನೆ ಹೇಗೆ ಮಾಡಬೇಕು ಹಾಗೂ ಬಿಬಿಎಂಪಿ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಚುನಾವಣೆ ಘೋಷಣೆಯಾಗುವವರೆಗೂ ಕಾಯದೇ ಈಗಿನಿಂದಲೇ ಚುನಾವಣಾ ಪೂರ್ವಸಿದ್ಧತೆಯಲ್ಲಿ ತೊಡಗಿಕೊಳ್ಳುವಂತೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಲಹೆ ಮಾಡಲಾಗುತ್ತದೆ.

ಎರಡು ರಾಷ್ಟ್ರೀಯ ಪಕ್ಷಗಳ ಪೈಪೋಟಿಯ ಎದುರಿಸಿ ಪಕ್ಷವನ್ನು ಬಲಗೊಳಿಸಬೇಕಾಗಿದೆ. ಜೆಡಿಎಸ್ ಅಧಿಕಾರದಲ್ಲಿದ್ದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡುಕೊಟ್ಟು ಪಕ್ಷ ಸಂಘಟನೆ ಚುರುಕುಗೊಳಿಸುವ ಬಗ್ಗೆ ಪಕ್ಷದ ವರಿಷ್ಠರು ಸಭೆಯಲ್ಲಿ ನಿರ್ದೇಶನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶಗೌಡ ಮಾಜಿ ವಿಧಾನಪರಿಷತ್ ಸದಸ್ಯರಾದ ಶರವಣ ಸೇರಿದಂತೆ ಬೆಂಗಳೂರು ನಗರದ ಜೆಡಿಎಸ್ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments