ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಶಾಸಕರು, ಮುಖಂಡರಿಗೆ ಉಸ್ತುವಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ರಾಜ್ಯದ ವಿಧಾನಸಭೆ ಉಪಚುನಾವಣೆಗೆ ಮಾಜಿ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಇಂದು ಸಂಜೆ ವೇಳೆಗೆ ಕ್ಷೇತ್ರವಾರು ಜವಾಬ್ದಾರಿಯನ್ನು ಜೆಡಿಎಸ್ ಹಂಚಿಕೆ ಮಾಡಲಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕ್ಷೇತ್ರವಾರು ಚುನಾವಣೆ ಉಸ್ತುವಾರಿಯನ್ನು ನೇಮಕ ಮಾಡಿ ಸಂಜೆ ವೇಳೆಗೆ ಪ್ರಕಟಿಸುವ ಸಾಧ್ಯತೆಗಳಿವೆ.

ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಮಾಜಿ ಸಚಿವರು, ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಚುನಾವಣಾ ಉಸ್ತುವಾರಿಯನ್ನು ಹಂಚಿಕೆ ಮಾಡಲಾಗಿದೆ. ಚುನಾವಣೆ ನಡೆಯುವ ಜಿಲ್ಲೆಯ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.

ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರ, ಚುನಾವಣಾ ತಂತ್ರಗಳ ಬಗ್ಗೆ ಪಕ್ಷದ ವರಿಷ್ಠರು ಮಾರ್ಗದರ್ಶನ ಮಾಡಿದ್ದಾರೆ. ಅದರಂತೆ ಆಯಾ ಕ್ಷೇತ್ರದಲ್ಲಿ ಸ್ಥಳೀಯ ವಿಚಾರಗಳಿಗೆ ಆದ್ಯತೆ ನೀಡಿ ಮತದಾರರ ಮನಗೆಲ್ಲಲು ಜೆಡಿಎಸ್ ತನ್ನದೇ ಆದ ಕಾರ್ಯತಂತ್ರ ಬಳಸಲಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಮುಂದಿಟ್ಟು ಮತಯಾಚನೆ ಮಾಡಲಾಗುತ್ತದೆ. ವಿಶೇಷವಾಗಿ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿದ ರೈತರ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಮೊದಲಾದವುಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡಲು ಉದ್ದೇಶಿಸಲಾಗಿದೆ.

ಈಗಾಗಲೇ 40 ಮಂದಿ ತಾರಾ ಪ್ರಚಾರಕರನ್ನು ಚುನಾವಣೆ ಪ್ರಚಾರಕ್ಕೆ ನಿಯೋಜಿಸಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.  ಪಕ್ಷದ ಅಧಿಕೃತ ಅಭ್ಯರ್ಥಿಗಳ ಪರವಾಗಿ ಉಪಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲಿದ್ದು, ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಲಾಗುತ್ತಿದೆ.

ನಿನ್ನೆಯಿಂದಲೇ ದೇವೇಗೌಡರು ಮತ್ತು ಕುಮಾರಸ್ವಾಮಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಇತರೆ ಮುಖಂಡರು ನಾಳೆಯಿಂದ ಪ್ರಚಾರ ಶುರು ಮಾಡಲಿದ್ದಾರೆ. ಪಕ್ಷದ ನಾಯಕರು, ಅಧಿಕೃತ ಅಭ್ಯರ್ಥಿಗಳ ಪರವಾಗಿ ನ.22ರಿಂದ ಚುನಾವಣಾ ಪ್ರಚಾರ ಅಂತಿಮಗೊಳ್ಳುವವರೆಗೂ ನಿರಂತರವಾಗಿ ಅಭ್ಯರ್ಥಿಗಳ ಪರವಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments