ಯಶವಂತಪುರ ಬಿಜೆಪಿ ಅಭ್ಯರ್ಥಿಯಿಂದ ಬಡವರಿಗೆ ಲಾಭವಿಲ್ಲ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ಉಪ ಚುನಾವಣೆ ನಡೆಸಲು ಆಡಳಿತ ಪಕ್ಷದಿಂದ ಜನರ ತೆರಿಗೆ ಹಣ ವ್ಯಯಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಟಿ.ಎನ್.ಜವರಾಯಿಗೌಡ ನಾಮಪತ್ರ ಸಲ್ಲಿಸುವ ಮುನ್ನ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜನರ ಹಣವನ್ನೇ ಚುನಾವಣೆಯಲ್ಲಿ ಖರ್ಚು ಮಾಡಲು ಹೊರಟಿದ್ದಾರೆ. ಅಂತಹವರಿಂದ ಬಡವರಿಗೆ ಯಾವುದೇ ಲಾಭವಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ರೋಷನ್ ಬೇಗ್ ಅವರು ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವ ಮೂಲಕ ಉತ್ತಮ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಹೇಳಿದರು. ಬೆಳಗಾವಿ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ರೈತರ ಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡು ಸಾಹುಕಾರ್ ಆದವರು ಇದ್ದಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಮೂರು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದೇವೆ. ಬೆಳಗಾವಿ ಅಭಿವೃದ್ಧಿಗೆ ನಾನು ಕೊಟ್ಟಷ್ಟು ಕೊಡುಗೆ ಮತ್ತೊಬ್ಬರು ನೀಡಿಲ್ಲ ಎಂದು ಸಮರ್ಥಿಸಿಕೊಂಡರು. ಆಪರೇಷನ್ ಕಮಲ ಆರಂಭವಾಗಿದ್ದೇ ಬೆಳಗಾವಿಯಿಂದ. ಅಂತಹವರಿಗೆ ತಕ್ಕ ಪಾಠ ಕಲಿಸಬೇಕೆಂದರು.

ಜವರಾಯಿಗೌಡ ಅವರು ಬಿಬಿಎಂಪಿ ಮಾಜಿ ಸದಸ್ಯೆ ಗಾಯಿತ್ರಿ ಜವರಾಯಿಗೌಡ, ಪಕ್ಷದ ಮುಖಂಡರಾದ ಹನುಮಂತೇಗೌಡ, ಹನುಮಂತರಾಯಪ್ಪ ಮತ್ತಿತರರೊಂದಿಗೆ ನಾಮಪತ್ರ ಸಲ್ಲಿಸಿದರು.

Facebook Comments