ಜೆಡಿಎಸ್-ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವಿಟ್ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18- ಕಾಂಗ್ರೆಸ್ ವಿರುದ್ಧ ಬಿಜೆಪಿ ಮತ್ತೆ ಇಂದು ಕೂಡ ದಾಳಿಯನ್ನು ಮುಂದುವರೆಸಿದೆ. ಜೊತೆಗೆ ಆರ್‍ಎಸ್‍ಎಸ್ ಸಂಘಟನೆ ಕುರಿತು ಟೀಕೆ ಮಾಡುತ್ತಿರುವ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದೆ. ದೇಶದಲ್ಲಿ ಸಾಕಷ್ಟು ಶಾಲೆಗಳಿದ್ದವು, ಆದರೆ 50 ವರ್ಷ ಮೇಲ್ಪಟ್ಟ ಅತಿ ಹಿರಿಯ ಯುವನಾಯಕ ಭಾರತದಲ್ಲಿ ಓದಲೇ ಇಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹೆಸರಳು ಹೇಳದೆ ಹರಿಹಾಯ್ದಿದೆ.

ವಯಸ್ಕರ ಶಿಕ್ಷಣ ಯೋಜನೆಯಿದ್ದರೂ ಕಠಿಣ ಬುದ್ಧಿ ಬೆಳೆಯಲೆ ಇಲ್ಲ. ತಾತ, ಮುತ್ತಾತ, ಅಪ್ಪ ಪ್ರಧಾನಿ ಆಗಿದ್ದಾರೆ ಎಂಬ ಒಂದೇ ಅರ್ಹತೆಯ ಆಧಾರದ ಮೇಲೆ ತಾನು ಪ್ರಧಾನಿಯಾಗುತ್ತೇನೆ ಎಂದು ಭಿಕ್ಷುಕನಂತೆ ಅಲೆಯುತ್ತಿದ್ದಾನೆ ಎಂದು ವ್ಯಂಗ್ಯವಾಡಿದೆ.

ಕೆಪಿಎಸ್‍ಸಿಯನ್ನು ದುರ್ಬಳಕೆ ಮಾಡಿಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಬೇಕಾದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಸರ್ಕಾರಿ ನೌಕರಿ ಒದಗಿಸಿದ್ದರು. ಮಾನ್ಯ ಕುಮಾರಸ್ವಾಮಿ ಅವರೇ, ಇವರಿಗೆಲ್ಲ ನೀವು ತರಬೇತಿ ನೀಡಿದ್ದೆಲ್ಲಿ? ಪದ್ಮನಾಭ ನಗರದಲ್ಲೋ, ಕೇತಗಾನ ಹಳ್ಳಿಯಲ್ಲೋ ಎಂದು ವ್ಯಂಗ್ಯವಾಡಿದೆ.

ಸಾಮಾಜಿಕ ಸಂಘಟನೆಯೊಂದರ ಕುರಿತು ಸಲ್ಲದ ಅಪವಾದ ಮಾಡುವ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಕರ್ನಾಟಕ ಲೋಕಸೇವಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದು ಅಪರಾಧವಲ್ಲವೇ? ಎಂದು ಪ್ರಶ್ನಿಸಿದೆ. ಕೆಪಿಎಸ್‍ಸಿ ಅಧ್ಯಕ್ಷರೊಬ್ಬರ ಕಾಲದಲ್ಲಿ ನೇಮಕದ ಅಂತಿಮ ಆದೇಶ ಸಿದ್ದವಾಗುತ್ತಿದ್ದದ್ದೇ ಪದ್ಮನಾಭನಗರದಲ್ಲಿ ಎಂಬ ಆರೋಪ ಇದ್ದಿದ್ದು ಸುಳ್ಳೇ? ಎಂದೆ ಮರುಪ್ರಶ್ನೆ ಹಾಕಿದೆ.

ಉಪ್ಪಿಲ್ಲದಿರುವಾಗ ಸೊಪ್ಪಿನ ಚಿಂತೆ, ಸೊಪ್ಪು ಸಿಕ್ಕಾಗ ಉಪ್ಪರಿಗೆ ಚಿಂತೆ ಉಪ್ಪರಿಗೆ ಸಿಕ್ಕಾಗ ಕೊಪ್ಪರಿಗೆ ಚಿಂತೆ- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗಾಗಿಯೇ ಬರೆದಂತಿದೆ ಈ ಕವಿ ವಾಕ್ಯ ಎಂದು ವ್ಯಂಗ್ಯವಾಡಿದೆ. ಸದಾ ವೈರುಧ್ಯದ ಗಣಿಯಂತಿರುವ ಕುಮಾರಸ್ವಾಮಿಯವರೇ, ಬಿಡುವಿನ ಸಂದರ್ಭದಲ್ಲಿ ಆತ್ಮಶೋಧಕ್ಕೂ ಒಂದಿಷ್ಟು ಸಮಯ ಮೀಸಲಿಡಿ.

ತಮಗೆ ಬೇಕಾದ ವ್ಯಕ್ತಿಯ ಕುಟುಂಬದವರಿಗೆ ಕೆಪಿಎಸ್‍ಸಿ ಮಾಜಿ ಅಧ್ಯಕ್ಷರೊಬ್ಬರ ಮೂಲಕ ಕ್ಲಾಸ್ ಒನ್ ಅಧಿಕಾರಿ ಹುದ್ದೆ ಕೊಡಿಸಿದ್ದೆ ಎಂಬ ನಿಮ್ಮ ಹೇಳಿಕೆಗೆ ರಾಜ್ಯವೇ ಸಾಕ್ಷಿಯಾಗಿದೆ. ಹಾಗಾದರೆ ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದು ಯಾರು? ಕುಮಾರ ಸ್ವಾಮಿಯೋ ಅಥವಾ ಸಾಮಾಜಿಕ ಸಂಘಟನೆಯೋ? ಎಂದು ಟೀಕಿಸಿದೆ.

ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ನನ್ನ ಆಸ್ತಿ ಎಷ್ಟಿತ್ತೋ ಅಷ್ಟೇ ಇದೆ. ಲೋಕಾಯುಕ್ತಕ್ಕೆ ದೂರು ಕೊಟ್ಟವರಿಗೆ ಅದರ ದಾಖಲೆ ಸಿಕ್ಕಿರಬಹುದು. 800 ಪಟ್ಟಿನಷ್ಟು ಆಸ್ತಿ ಏರಿಕೆ ಆದದ್ದು ಯಾರದ್ದು? ಕಾಂಗ್ರೆಸ್‍ನವರಿಗೆ ಗೊತ್ತಿರಬಹುದ್ದಲ್ಲವೆ? ತಾನು ಕಳ್ಳ ಪರರ ನಂಬ. ಕಳ್ಳ ಕಾಂಗ್ರೆಸ್ ಎಂದು ತಿರುಗೇಟು ನೀಡಿದ್ದಾರೆ.

ಕೋತಿ ತಾನು ಬೆಣ್ಣೆ ತಿಂದು ಮೇಕೆ ಮೂತಿಗೆ ಹಚ್ಚಿದಂತೆ ವಿ.ಎಸ್.ಉಗ್ರಪ್ಪ ಮಾಧ್ಯಮಗಲ್ಲಿ ಬಹಿರಂಗ ಮಾಡಿದ ಆ ಪಕ್ಷದ ಅಧ್ಯಕ್ಷರ ಸತ್ಯ ವಿಶ್ವವಿಖ್ಯಾತವಾಗುತ್ತಿದ್ದಂತೆ ಬಿಜೆಪಿ ನಾಯಕರ ತಲೆಗೆ ಕಟ್ಟಲು ಮುಂದಾದರು. ಕಮಿಷನ್ ಗಿರಾಕಿಗಳ ಸತ್ಯ ಹೊರ ಬರುತ್ತಿದ್ದಂತೆ ಬಿಜೆಪಿ ವಿರುದ್ಧ ಟ್ಟೀಟ್ ಮಾಡಿ ವಿಷಯಾಂತರ ಮಾಡುತ್ತಿರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲೇ ಭ್ರಷ್ಟಾಚಾರದ ಹೆಗ್ಗಣಗಳಿಂದ ಲೂಟಿಯಾಗುತ್ತಿದ್ದರೂ ಬೇರೆಯವರ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗೆ ಯಾವ ಬೆಲೆಯಿದೆ? ನಾವು ಎಲ್ಲಾ ವರ್ಗದ ಪರ ಎಂದು ಎಲ್ಲರ ಮುಂದೆ ಪರ್ಸೆಂಟೇಜ್‍ಗಾಗಿ ಕೈ ಚಾಚುವ ಭ್ರಷ್ಟರಿಂದ ಈ ದೇಶ, ರಾಜ್ಯ ಉದ್ದಾರವಾಗಲು ಸಾಧ್ಯವೇ? ಭ್ರಷ್ಟ ಕಾಂಗ್ರೆಸ್ ಎಂದು ಅವರು ಟೀಕಾ ಪ್ರಹಾರ ನಡೆಸಿದ್ದಾರೆ.

Facebook Comments