ಸರ್ಕಾರಕ್ಕೆ ವರ್ಷ ತುಂಬಿದರೂ ದೋಸ್ತಿಗಳಲ್ಲಿಲ್ಲ ಸಂತಸ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದರೂ ಸಂಭ್ರಮ ಕಾಣುತ್ತಿಲ್ಲ. ಉಭಯ ಪಕ್ಷಗಳಲ್ಲಿ ಚಿಂತೆಯೇ ಕಾಡುತ್ತಿದೆ. ಒಂದೆಡೆ ಲೋಕಸಭಾ ಚುನಾವಣಾ ಫಲಿತಾಂಶದ ಚಿಂತೆಯಾದರೆ, ಮತ್ತೊಂದೆಡೆ ಸರ್ಕಾರಕ್ಕೆ ಎದುರಾಗುತ್ತಿರುವ ಗಂಡಾಂತರಗಳ ಚಿಂತೆ. ಹೀಗಾಗಿ ಉಭಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಚಿಂತೆಯಲ್ಲೇ ಮುಳುಗಿದ್ದಾರೆ.

ರಾಜ್ಯದ ಮೈತ್ರಿ ಸರ್ಕಾರ ಹಲವು ರಾಜಕೀಯ ಏರಿಳಿತಗಳ ನಡುವೆಯೂ ನಾಳೆಗೆ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಎರಡನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಶಾಸಕರು ಸಂಭ್ರಮಾಚರಣೆ ಮಾಡುವುದು ರೂಢಿ. ಆದರೆ, ಮೈತ್ರಿ ಸರ್ಕಾರ ಬಂದಾಗಿನಿಂದಲೂ ಆತಂಕ ದೂರವಾಗಿಲ್ಲ.

ಸರ್ಕಾರ ಉಳಿಯುತ್ತದೆಯೋ ಅಥವಾ ಪತನವಾಗುತ್ತದೆಯೋ ಎಂಬ ಚರ್ಚೆಯೇ ಪದೇ ಪದೇ ಕೇಳಿಬಂದಿತ್ತು. ಈ ನಡುವೆ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಆಪರೇಷನ್ ಕಮಲದ ಪ್ರಯತ್ನವನ್ನು ಪದೇ ಪದೇ ನಡೆಸಿದ ಆರೋಪಕ್ಕೆ ಗುರಿಯಾಗಿತ್ತು.

ನಾಳೆ ಲೋಕಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ಮಿತ್ರ ಪಕ್ಷಗಳಿಗೆ ಖುಷಿ ನೀಡಲಿದೆಯೋ ಅಥವಾ ಬೇಸರ ತರಲಿದೆಯೋ ಎಂಬ ಚರ್ಚೆ ಎರಡೂ ಪಕ್ಷಗಳಲ್ಲಿ ನಡೆಯುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಚುನಾವಣೋತ್ತರ ಸಮೀಕ್ಷೆಗಳು ಮೈತ್ರಿಗೆ ನೆಮ್ಮದಿ ತರುವ ರೀತಿಯಲ್ಲಿ ಬಂದಿಲ್ಲ. ಫಲಿತಾಂಶವೂ ಅದೇ ರೀತಿ ಹೊರ ಬಂದರೆ ಮಿತ್ರ ಪಕ್ಷಗಳ ಅಸಮಾಧಾನ ಮತ್ತಷ್ಟು ಹೆಚ್ಚಾಗಲಿದೆ.

ಕಾಂಗ್ರೆಸ್-ಜೆಡಿಎಸ್ ನಾಯಕರು, ಮುಖಂಡರ ನಡುವಿನ ಪರಸ್ಪರ ಆರೋಪ-ಪ್ರತ್ಯಾರೋಪ, ಹೇಳಿಕೆಗಳು ಸರ್ಕಾರಕ್ಕೆ ವರ್ಷ ತುಂಬಿದ ಸಂಭ್ರಮಕ್ಕೆ ಬ್ರೇಕ್ ಹಾಕಿದಂತಾಗಿದೆ. ಅಲ್ಲದೆ, ಫಲಿತಾಂಶ ಮತ್ತು ಸರ್ಕಾರಕ್ಕೆ ವರ್ಷ ತುಂಬಿದ್ದು ಒಂದೇ ದಿನ ಬಂದಿರುವುದು ಕೂಡ ವಿಶೇಷ.

ಜೆಡಿಎಸ್‍ನಲ್ಲಿ ಮಂಡ್ಯ, ಹಾಸನ, ತುಮಕೂರು ಲೋಕಸಭಾ ಚುನಾವಣಾ ಫಲಿತಾಂಶ ಮುಖ್ಯವಾಗಿದ್ದು, ಸರ್ಕಾರದ ವರ್ಷಾಚರಣೆಗಿಂತ ನಾಳಿನ ಫಲಿತಾಂಶ ಪಕ್ಷಕ್ಕೆ ಅನುಕೂಲವಾಗಲಿದೆಯೋ ಇಲ್ಲವೋ ಎಂಬ ಜಿಜ್ಞಾಸೆಯೇ ಹೆಚ್ಚಾಗಿದೆ.

ಒಟ್ಟಾರೆ ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂಭ್ರಮಕ್ಕಿಂತ ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಸರ್ಕಾರ ಸ್ಥಿರತೆಯ ವಿಚಾರವೇ ಹೆಚ್ಚಾಗಿ ಕಾಡುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ