ಜೆಡಿಎಸ್ ಸಮಾವೇಶ: ಕಾರ್ಯಕರ್ತರಿಗೆ ಚುನಾವಣೆಗೆ ಸಜ್ಜಾಗುವಂತೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.23- ಚುನಾವಣೆ ಯಾವಾಗ ಬಂದರೂ ಎದುರಿಸಲು ಸಜ್ಜಾಗಿರಬೇಕೆಂದು ಜೆಡಿಎಸ್ ನಾಯಕರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದರು.
ಅರಮನೆ ಮೈದಾನದಲ್ಲಿಂದು ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಪಕ್ಷಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಚುನಾವಣೆ ಸಜ್ಜಾಗುವಂತೆ ಕರೆ ನೀಡಿದರು. ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು.

ಆದರೆ ಚುನಾವಣೆ ಬರಲಿ ಎಂದು ಕಾದು ಕೂರುವುದಕ್ಕಿಂತ ನಾಳೆ ಬಂದರೂ ಚುನಾವಣೆ ಎದುರಿಸಲು ಸಜ್ಜಾಗಿರಬೇಕು ಎಂದು ಕಿವಿಮಾತು ಹೇಳಿದರು. ಲೋಕಸಭೆ, ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಡೆಯಿಂದ ಯಾರೂ ದೃತಿಗೆಡಬೇಕಿಲ್ಲ. ಸೋಲು-ಗೆಲುವು ಸಹಜ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಲಗೊಳಿಸೋಣ. ಇದಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರುಗಳಿಂದ ಪಕ್ಷ ಸಂಘಟನೆಗೆ ಆದ್ಯತೆ ನೀಡುವಂತೆ ಸಲಹೆ ಮಾಡಲಾಯಿತು. ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ನಾಯಕರು ಸಿಎಎ ಮತ್ತು ಎನ್‍ಸಿಆರ್‍ನ್ನು ತೀವ್ರವಾಗಿ ವಿರೋಧಿಸಿದರು. ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಮಾತನಾಡಿ, ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಮೂರು ವರ್ಷ ಇರುತ್ತೋ ಇಲ್ಲವೋ.. ಚುನಾವಣೆ ನಾಳೆ ಬಂದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.

ನಾಡಿನ ನೆಲಜಲ ರಕ್ಷಣೆಗೆ ಜೆಡಿಎಸ್ ಇದೆ. ಸಂಕಷ್ಟದಲ್ಲಿರುವ ಪಕ್ಷವನ್ನು ಬಲಗೊಳಿಸಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದರು. ಸಂಪುಟ ವಿಸ್ತರಣೆಗೂ ಅವಕಾಶ ನೀಡದೆ ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಟೀಕಾಪ್ರಹಾರ ಮಾಡಿದ ಅವರು, ಮನವಿ ಸ್ವೀಕರಿಸಲು ಪ್ರಧಾನಿ ಅವಕಾಶ ನೀಡದಿರುವುದು, ತಿಂಗಳುಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕ ರಣ ಮಾಡುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದರು. ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ ಸರ್ಕಾರ ಜನರನ್ನು ದಾರಿ ತಪ್ಪಿಸಿ ಅನಗತ್ಯ ಭಾವನಾತ್ಮಕ ವಿಚಾರಗಳಿಗೆ ಆದ್ಯತೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಸ್ವರ್ಗಕ್ಕೆ ಮೂರೇ ಗೇಣು ಎಂಬ ರೀತಿಯಲ್ಲಿ ಆಡಳಿತ ನಡೆಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಎಲ್ಲವೂ ತಿರುಗುಮುರುಗು ಆಗಿದೆ ಎಂದರು. ಮೈಸೂರಿನ ನೂತನ ಮೇಯರ್ ತಸ್ಲೀಮಾ ಅವರನ್ನು ಅಭಿನಂದಿಸಲಾ ಯಿತು. ಸಮಾವೇಶದಲ್ಲಿ ಮಾಜಿ ಸಚಿವ ರಾದ ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶಂಪುರ್, ಲೀಲಾದೇವಿ ಆರ್‍ಪ್ರಸಾದ್, ಸತ್ಯನಾರಾಯಣ, ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಬಿ.ಎಂ.ಫಾರೂಖ್, ಶಾಸಕರಾದ ಎ.ಟಿ.ರಾಸ್ವಾಮಿ, ಡಾ.ಅನ್ನದಾನಿ, ಜಫ್ರುಲ್ಲಾ ಖಾನ್, ಕೋನರೆಡ್ಡಿ ಹಲವು ಪಾಲ್ಗೊಂಡಿದ್ದರು.

Facebook Comments