“ನಾನು ಜೆಡಿಸ್ ಪಕ್ಷ ಬಿಡಲಿಲ್ಲ, ಹೊರಹಾಕಿದರು” : ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.22- ತಾವು ಜೆಡಿಎಸ್ ಪಕ್ಷವನ್ನು ಬಿಡಲಿಲ್ಲ. ಜೆಡಿಎಸ್‍ನಿಂದ ಉಚ್ಚಾಟಿಸಲಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದರು.

ಭೋಜನ ವಿರಾಮದ ನಂತರ ಸದನ ಸಮಾರಂಭಗೊಂಡಾಗ ಬಿಜೆಪಿ ಶಾಸಕ ಸಿ.ಟಿ.ರವಿ ಮಾಡಿದ ಪ್ರಸ್ತಾಪಕ್ಕೆ ಮಧ್ಯಪ್ರವೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ತಮ್ಮನ್ನು ವಜಾಗೊಳಿಸಲಾಯಿತು.

ಆ ನಂತರ ಒಂದು ವರ್ಷಗಳ ಕಾಲ ಅಹಿಂದ ಸಂಘಟನೆ ಮಾಡಿ ಆನಂತರ ಕಾಂಗ್ರೆಸ್‍ಗೆ ಸೇರಿದ್ದು ಎಂದರು. ಅಧಿಕಾರಕ್ಕಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ವಾಮಮಾರ್ಗ ಹಾಗೂ ಹಿಂಬಾಗಿಲ ಮೂಲಕ ಪ್ರಯತ್ನಿಸಲಾಗುತ್ತಿದೆ.

ಹಣದ ಆಮೀಷ ಹೊಡ್ಡಿ ಶಾಸಕರನ್ನು ಮುಂಬೈನಲ್ಲಿಡಲಾಗಿದೆ. ನೀವು ಅಧಿಕಾರಕ್ಕೆ ಬನ್ನಿ ಬೇಡ ಎನ್ನುವುದಿಲ್ಲ. ಅದರಲ್ಲಿ ನನ್ನ ತಕರಾರಿಲ್ಲ. ಆದರೆ, ಅಧಿಕಾರಕ್ಕಾಗಿ ಇಂತಹ ಮಾರ್ಗಗಳನ್ನು ಅನುಸರಿಸುವುದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮಾಡುವಂತದ್ದಲ್ಲ ಎಂದರು.

ಬಿಜೆಪಿ ಶಾಸಕ ಕುಮಾರ್‍ಬಂಗಾರಪ್ಪ ಮಾತನಾಡಿ, ಮುಂಬೈನಲ್ಲಿರುವ ಶಾಸಕರನ್ನು ಉಚ್ಚಾಟಿಸಿಬಿಡಿ ಎಂದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್, ಭಾರತೀಯ ಜನಸಂಘದ ದೀನ್‍ದಯಾಳ್ ಉಪಾಧ್ಯಾಯ ಬಿಜೆಪಿಯಲ್ಲಿ ಇಲ್ಲ. ಕಾರ್ನಾಡ್ ಸದಾಶಿವರಾವ್ ಅವರು ಕಾಂಗ್ರೆಸ್‍ನಲ್ಲಿ ಇಲ್ಲ.

ಅವರ ದೇಶ ಭಕ್ತಿಯನ್ನು ಪ್ರಶ್ನಿಸುವಂತಿಲ್ಲ. ಜನರ ಹಸಿವು ನೀಗಿಸಲು ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಬಡವರ ಹಸಿವು ನೀಗಿಸಲು ಸಹಾಯಧನದಲ್ಲಿ ಪಡಿತರ ನೀಡುವ ವ್ಯವಸ್ಥೆ ಜಾರಿಗೆ ತರಲಾಯಿತು ಎಂದು ಕೆಲವು ಘಟನೆಗಳನ್ನು ಉಲ್ಲೇಖಿಸಿ ಹೇಳಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ವಿಶ್ವಾಸಮತಯಾಚನಾ ನಿರ್ಣಯದ ಮೇಲಿನ ಚರ್ಚೆಯನ್ನು ಇಂದೇ ಮುಗಿಸೋಣ. ನನ್ನನ್ನು ವಚನ ಭ್ರಷ್ಟನನ್ನಾಗಿ ಮಾಡಬೇಡಿ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ಸಿ.ಟಿ.ರವಿ, ಆಡಳಿತ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿ, ಎಲ್ಲರೂ ಬಿಜೆಪಿ ಸದಸ್ಯತ್ವ ಪಡೆಯಿರಿ. ನಿಮ್ಮ ಅರ್ಹತೆ ಅನುಗುಣವಾಗಿ ಸ್ಥಾನ ಕೊಡುತ್ತೇವೆ ಎಂದರು.

ಆಗ ಮಧ್ಯ ಪ್ರವೇಶಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ ಹಾಗೂ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರಿಗೆ ವ್ಯಕ್ತಿಗತವಾಗಿ ನಿಮ್ಮೊಂದಿಗೆ ಮಾತನಾಡುತ್ತೇವೆ ಎಂದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಚೆಲುವರಾಯಸ್ವಾಮಿ, ಅಖಂಡಶ್ರೀನಿವಾಸಮೂರ್ತಿ ಅವರಿಗೆ ಯಾವ ಭರವಸೆಕೊಟ್ಟು ಕರೆದುಕೊಂಡು ಹೋಗಿದ್ದೀರಿ ಎಂದು ಛೇಡಿಸಿದರು. ಆಗ ಮೇಲಿನಂತೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin