ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ಹುಷಾರ್: ಎಚ್‍ಡಿಕೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.18- ಲಕ್ಷಾಂತರ ಕಾರ್ಯಕರ್ತರ ಶಕ್ತಿಯಿರುವ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಕಚೇರಿ ಜೆಪಿಭವನದ ಲ್ಲಿಂದು ನಡೆದ ಕೋರ್‍ಕಮಿಟಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತಂಟೆಗೆ ಬಂದರೆ ಎಡವಟ್ಟಾಗಲಿದೆ ಎಂದು ಎಚ್ಚರಿಸಿದರು.

ಯಡಿಯೂರಪ್ಪನಂಥವರು 100 ಜನ ಬಂದರೂ, ಇನ್ನೊಂದು ಜನ್ಮವೆತ್ತಿದರೂ ಜೆಡಿಎಸ್ ಮುಗಿಸಲು ಸಾಧ್ಯವಿಲ್ಲ. ಬಂಡವಾಳ ನನ್ನ ಬಳಿ ಇದೆ. ನಾನು ಕೈ ಹಾಕಿದರೆ ಪರಿಣಾಮ ಪ್ರತಿಕೂಲವಾಗಲಿದೆ. ಇಲ್ಲಿಯವರೆಗೂ ಸೇಫಾಗಿದ್ದೀರಿ. ನಾನು ಮೌನವಾಗಿದ್ದೇನೆ. ಜೆಡಿಎಸ್ ಸುದ್ದಿಗೆ ಬಂದರೆ ಪರಿಸ್ಥಿತಿ ಪ್ರತಿಕೂಲವಾಗಲಿದೆ ಎಂದು ವಾಗ್ದಾಳಿ ನಡೆಸಿದರು.
2008ರಲ್ಲೇ ಜೆಡಿಎಸ್ ಮುಗಿಸುತ್ತೇನೆ, ಅಪ್ಪ ಮಗನನ್ನು ಮುಗಿಸುತ್ತೇನೆ ಎಂದು ಹೇಳಿದ್ದಿರಿ.

ಆಗ ಮೂವರು ಮುಖ್ಯಮಂತ್ರಿಗಳು ಬದಲಾದರು. ರಾಜಕೀಯಕ್ಕೆ ವೈಯಕ್ತಿಕ ಸಿ.ಡಿ ಬಳಸಿಕೊಳ್ಳುವುದಿಲ್ಲ. ನಾಡಿನ ಸಂಪತ್ತು ಲೂಟಿ ದಾಖಲೆಗಳನ್ನು ಬಳಸಿಕೊಳ್ಳುತ್ತೇನೆ ಎಂದರು. ಸಿ.ಡಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ. ಯಾರ್ಯಾರು, ಯಾವಾಗ, ಯಾವ ರೀತಿ ಬಳಸಿಕೊಳ್ಳು ತ್ತಾರೆ ಎಂಬುದು ಗೊತ್ತಿದೆ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‍ನ್ನು ಬಿಜೆಪಿ ಬಿ ಟೀಂ ಎಂದು ಕಾಂಗ್ರೆಸ್ ನಾಯಕರು ಕರೆದಿದ್ದರು. ಈಗ ಯಡಿಯೂರಪ್ಪ ಏಪ್ರಿಲ್‍ನಲ್ಲಿ ಬದಲಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರ್‍ಎಸ್‍ಎಸ್ ಮೂಲದ ಮಾತ ನಾಡಿದ್ದಾರೆ. ಹಾಗಾದರೆ ಆರ್‍ಎಸ್‍ಎಸ್ ಬೀ ಟೀಮ್ ಎಂದೇ ಪ್ರಶ್ನಿಸಿದರು.

ನೀರಾವರಿ ಸಚಿವರು 9 ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಣ ಉಪಯೋಗ ಮಾಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕ್ರಿಯಾಶೀಲವಾಗಿದ್ದ ಇಡಿ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಈಗ ಎಲ್ಲಿ ಹೋದವು ಎಂದು ಮರು ಪ್ರಶ್ನೆ ಹಾಕಿದರು.

ಮುಂದಿನ ಐದು ವರ್ಷವೂ ನಾನೇ ಸಿಎಂ ಆಗುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಮುಂದೇನಾಯ್ತು ಎಂಬುದು ಗೊತ್ತಿದೆ. ಅಧಿಕಾರದ ಮದದಲ್ಲಿ ಹೇಳಿಕೆ ನೀಡುವುದಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯ ಸಾಧನೆ ಯನ್ನು ಬಿಂಬಿಸಿಕೊಳ್ಳಲಾಗುತ್ತಿದೆ. ತಾಪಂ, ಜಿಪಂ ಚುನಾವಣೆಯಲ್ಲಿ ಸಾಧನೆ ಗೊತ್ತಾಗಲಿದೆ ಎಂದು ವ್ಯಂಗ್ಯವಾಡಿದರು.

ಮಂತ್ರಿ ಮಂಡಲ ರಚನೆಯಾಗಿದೆ. ಇನ್ನಾದರೂ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಿ. ಜನರಿಗೆ ನೆಮ್ಮದಿಯಿಲ್ಲ, ಸಂಕಷ್ಟ ಅನುಭವಿಸುವಂತಾಗಿದೆ. ಜನರ ವಿಶ್ವಾಸ ಗಳಿಸುವಂತಹ ಆಡಳಿತ ನಡೆಸಿ ಎಂದು ಸಲಹೆ ಮಾಡಿದರು.

2008ರಲ್ಲಿ 17 ಶಾಸಕರನ್ನು ಆಪರೇಷನ್ ಕಮಲ ಮಾಡಿದ್ದರು. ಆಗಲೂ ಒಳ್ಳೆಯ ಸರ್ಕಾರ ಕೊಟ್ಟರೇ? ನನ್ನ ವಿರುದ್ಧ ವಚನಭ್ರಷ್ಟತೆಯ ಆರೋಪ ಹೊರಿಸಿದರು. ಈಗಲೂ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಜನರು ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

Facebook Comments