ಸ್ವತಂತ್ರ ಸರ್ಕಾರ ರಚನೆಗೆ ಜೆಡಿಎಸ್ ಸಂಕಲ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 14- ಮೈತ್ರಿ ಸರ್ಕಾರದ ಸಹವಾಸ ಬೇಡ ಬದಲಾಗಿ ಸ್ವತಂತ್ರ ಸರ್ಕಾರ ತರಲು ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ. ನೆಲಮಂಗಲ ಸಮೀಪ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜೂನ್, ಜುಲೈನಲ್ಲಿ ಮತ್ತೊಂದು ಸುತ್ತಿನ ರಥಯಾತ್ರೆಯನ್ನು ಹಳ್ಳಿ, ಹಳ್ಳಿಗಳಲ್ಲಿ ನಡೆಸುತ್ತೇವೆ. ನಾನೇ ಜನರ ಮುಂದೆ ಬರುತ್ತೇನೆ ಎಂದರು.

ನಮ್ಮ ಪಕ್ಷದಿಂದಲೇ ಬೆಳೆದು ಹೋದವರು ಜೆಡಿಎಸ್ ಮುಗಿದೇ ಹೋಯಿತು ಎಂದಿದ್ದರು. ಆದರೆ ಜನತಾ ಜಲಧಾರೆ ಸಮಾವೇಶ ಅವರಿಗೆ ಉತ್ತರ ಕೊಟ್ಟಿದೆ ತಿರುಗೇಟು ನೀಡಿದ್ದಾರೆ. 90 ವರ್ಷ ವಯಸ್ಸಿನಲ್ಲೂ ನಾಡಿನ ಜನರಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ರಾಜಕೀಯದ ಬೆಳವಣಿಗೆಗಳ ಪರಿಣಾಮವಾಗಿ ನಾನು ಎರಡು ಬಾರಿ ರಾಜ್ಯದ ಮುಖ್ಯ ಮಂತ್ರಿಯಾದೆ. ಆದರೆ ಯಾವುದೇ ಕಾರ್ಯಕ್ರಮ ಕೊಡಲು ಸ್ವತಂತ್ರ ಅಧಿಕಾರ ಇರಲಿಲ್ಲ. ರೈತರ ಸಾಲ ಮನ್ನಾ ಮಾಡಲು ಮುಂದಾದಾಗ ನೋವು ಅನುಭವಿದ್ದು ನನಗೆ ಮಾತ್ರ ಗೊತ್ತು ಎಂದರು.

ಜೆಡಿಎಸ್ ನಲ್ಲಿ ಟಿಕೆಟ್ ಸಿಗಬೇಕಾದರೆ ಹಣ ಕೊಡಬೇಕು ಎಂದು ಒಬ್ಬರು ಆರೋಪ ಮಾಡಿದರು. ಆದರೆ ಅನ್ನದಾನಿ ಬಡವರಾದರೂ ಟಿಕೆಟ್ ಕೊಟ್ಟು ಚುನಾವಣಾ ಖರ್ಚನ್ನು ಪಕ್ಷ ಭರಿಸಿದೆ ಎಂದರು.

ಬಿಜೆಪಿ, ಕಾಂಗ್ರೆಸ್ ನಾಯಕರಷ್ಟು ಅವಸರ ನಮಗೆ ಇರಲಿಲ್ಲ. ಕಳೆದ ತಿಂಗಳಿಂದ ಜಲಧಾರೆ ಕಾರ್ಯಕ್ರಮ ಆರಂಭ ಆಯ್ತು. ಅಂದಿನಿಂದ ಇಂದಿನವರೆಗೆ ನಮಗೆ ಸಾಥ್ ಕೊಟ್ಟಿದ್ದೀರಾ. ಮೈಸೂರಿನಲ್ಲಿ ಒಂದು ಸ್ಥಾನ ಬರಲ್ಲ ಎಂದು ಇಲ್ಲೇ ಬೆಳೆದು ಹೋದವರೇ ಹೇಳಿದರು. ಆದರೆ ಇವತ್ತು ನೀವು ಜಲಧಾರೆ ಸಮಾವೇಶದ ಮೂಲಕ ನಮ್ಮ ಶಕ್ತಿ ತೋರಿಸಿದ್ದಿರಾ ಎಂದು ನುಡಿದರು.

ನನ್ನ ಕೊನೆಯ ಉಸಿರು ಇರು ವವರೆಗೂ ನಿಮಗಾಗಿ ಈ ಜೀವನ. ನಾನು ಮಣ್ಣಿಗೆ ಹೋಗೋದ್ರೊಳಗೆ ನಿಮ್ಮ ಹೃದಯದಲ್ಲಿ ನನಗೆ ಕೊಡುವ ಸ್ಥಾನ ಗಟ್ಟಿಯಾಗಿರಲಿ ಎಂದು ಹೇಳಿದರು.

ಕೊರೊನಾದಿಂದ ಸಾವನ್ನಪ್ಪಿದ ಕುಟುಂಬಕ್ಕೆ ಐದು ಲಕ್ಷ ರೂ. ಕೊಡುತ್ತೇವೆ ಅಂದರು. ಆದರೆ, ಇನ್ನೂ ಈ ಸರ್ಕಾರ ಕೊಟ್ಟಿಲ್ಲ. ನಿತ್ಯ ಎಷ್ಟು ಕಷ್ಟ ಪಡ್ತಾ ಇದ್ದೀರಾ ಶಾಲೆ ಫೀಸ್ ಕಟ್ಟಲು, ಆಸ್ಪತ್ರೆಗಳಿಗೆ ಅಂತ ಗೊತ್ತಿದೆ. ನಿತ್ಯ ಸಾಕಷ್ಟು ಜನರನ್ನು ನೋಡ್ತಾ ಇದ್ದೀನಿ. ಪಂಚರತ್ನ ಯೋಜನೆ ಹುಡುಗಾಟಿಕೆಗೆ ಮಾಡಿದ್ದಲ್ಲ. ನಿಮ್ಮಗಳ ಕಷ್ಟಗಳನ್ನು ನೋಡಿಯೇ ಮಾಡಿರೋದು ಎಂದು ಹೇಳಿದರು.

ಯಾರೂ ನಾಯಕರನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ನಿಮ್ಮ ದುಡಿಮೆಯೇ ನಾಯಕತ್ವ ರೂಪಿಸುತ್ತದೆ. ನಾನು ಈಗಾಗಲೇ ಎರಡು ಭಾರಿ ಸಿಎಂ ಆಗಿದ್ದೇನೆ. ರಾಜಕೀಯದ ಕೆಲ ಬೆಳವಣಿಗೆಯಿಂದ ಎರಡು ಭಾರಿ ಸಿಎಂ ಆದೆ. ಆದರೆ, ಸ್ವತಂತ್ರವಾದ ಸರ್ಕಾರ ಇರಲಿಲ್ಲ ಈಗ ಸ್ವತಂತ್ರ ಸರ್ಕಾರ ರಚಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ವಿದೆ ಎಂದರು.

2023ಕ್ಕೆ ನಾಡಿನ ಜನತೆಗೆ ಜೆಡಿಎಸ್ ಪರಿಹಾರವಾಗಲಿದೆ. ನಮ್ಮ ಪಕ್ಷ ಅಕಾರಕ್ಕೆ ಬರಲಿದೆ. ಕುರುಬ ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳ ಬೆನ್ನಿಗೆ ನಿಲ್ಲುತ್ತೇನೆ. ಐದು ವರ್ಷಗಳಲ್ಲಿ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸದೆ ಇದ್ದರೆ ಮತ್ತೆ ನಿಮ್ಮ ಮುಂದೆ ಬರುವುದಿಲ್ಲ ಎಂದು ನುಡಿದರು.

Facebook Comments