ಜೆಡಿಎಸ್‍ನ ‘ಜನತಾ ಪತ್ರಿಕೆ’ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.8- ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ಇಂದು ಲೋಕಾರ್ಪಣೆ ಮಾಡಿದ ಜನತಾ ಪತ್ರಿಕೆಯು ಜೆಡಿಎಸ್ ಪಕ್ಷದ ಮುಖವಾಣಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ಭವನದಲ್ಲಿಂದುಜನತಾ ಪತ್ರಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಮಾಜದ ಹಲವು ಸಮಸ್ಯೆಗಳಿಗೆ ಸ್ಪಂಧಿಸುವ ಉದ್ದೇಶದಿಂದ ಪತ್ರಿಕೆ ಪ್ರಾರಂಭಿಸಲಾಗಿದೆ.

ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಲಿದೆ ಎಂದರು. ಬಿಡದಿ ಬಳಿಯ ತಮ್ಮ ತೋಟದಲ್ಲಿ ಇತ್ತೀಚೆಗೆ 7 ದಿನಗಳ ಕಾಲ ನಡೆಸಿದ ಯಶಸ್ವಿ ಕಾರ್ಯಾಗಾರದ ನಂತರ ಪತ್ರಿಕೆಯನ್ನು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆಶೀರ್ವಾದದೊಂದಿಗೆ ಆರಂಭಿಸಲಾಗಿದೆ.

ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ತಮ್ಮದೇ ಆದ ಕಾರ್ಯಕ್ರಮಗಳನ್ನು ತಲುಪಿಸಲು ಪತ್ರಿಕೆಗಳನ್ನು ನಡೆಸುತ್ತಿವೆ. ಆದರೆ ಜನತಾ ಪತ್ರಿಕೆ ನಮ್ಮ ಪಕ್ಷದ ಮುಖವಾಣಿ ಅಲ್ಲ ಎಂದು ಸ್ಪಷ್ಟಪಡಿಸಿದರು. ನಾಡಿನ ಜನರು ಎದುರಿಸುವಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪತ್ರಿಕೆ ಮೂಲಕ ಕಾರ್ಯ ನಿರ್ವಹಿಸೋಣ. 2023ಕ್ಕೆ ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಪಕ್ಷವನ್ನು ತರುವ ಸಂಕಲ್ಪನೊಂದಿಗೆ ಕಾರ್ಯೋನ್ಮುಖರಾಗಿದ್ದೇವೆ. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ನಿರ್ವಹಿಸಬೇಕು. ಉಪ ಚುನಾವಣೆಗಳ ಏಳು-ಬೀಳುಗಳೇ ಬೇರೆ.

ಸಾರ್ವತ್ರಿಕ ಚುನಾವಣೆಯೇ ಬೇರೆ. ನಾವು 123ರ ಗುರಿ ಮುಟ್ಟಲು ದೃಢವಾದ ಸಂಕಲ್ಪದೊಂದಿಗೆ ಕಾರ್ಯೋನ್ಮುಖರಾಗಬೇಕು. ಇದುವರೆಗೂ ನಾವು ಎಲ್ಲಿ ಎಡವಿದ್ದೇವೆ, ನಮ್ಮ ವೈಫಲ್ಯಗಳೇನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. 2023ರವರೆಗೆ ಒಂದೂ ವರ್ಷಗಳ ಕಾಲ ಹೊಸ ರೀತಿಯನ್ನು ನಾಡನ್ನು ಕಟ್ಟುವ ಕೆಲಸ ಮಾಡಲು ಸಂಕಲ್ಪ ಮಾಡಿದ್ದೇವೆ. ಅಲ್ಲಿಯವರೆಗೂ ಯಾವುದೇ ಸಂಘಟನೆ, ವ್ಯಕ್ತಿ, ಪಕ್ಷದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜನತಾ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಸಿ.ರಾಮಯ್ಯ, ಯಾವುದೇ ಪತ್ರಿಕೆ ಬೆಳೆಯಬೇಕಾದರೆ ಜನರ ಅಪ್ಪುಗೆ, ಮೆಚ್ಚುಗೆ ಇರಬೇಕು. ಸಮಾಜದಲ್ಲಿನ ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು. ಜನರ ನಂಬಿಕಾರ್ಹತೆ ಕಳೆದುಕೊಳ್ಳದ ರೀತಿಯಲ್ಲಿ ನಡೆಯಬೇಕು.

ಗುಣಮಟ್ಟದ ಪತ್ರಿಕೆಯಾಗಲು ಆ ಪತ್ರಿಕೆಯಲ್ಲಿ ದುಡಿಯುವವರಲ್ಲಿ ಬದ್ದತೆ ಇರಬೇಕು. ನುರಿತ ಪರಿಣಿತರಿಂದ ಪ್ರಚಲಿತ ಆಗುಹೋಗುಗಳ ಬಗ್ಗೆ ಲೇಖನ, ವಿಮರ್ಶೆ ಬರೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಪತ್ರಿಕೆ ನಡೆಸುವುದು ತುಂಬ ಕಷ್ಟ. ಸಾಗುವ ದಾರಿಯಲ್ಲಿ ಕಲ್ಲುಮುಳ್ಳುಗಳೇ ಹೆಚ್ಚು, ಮುಳ್ಳಿನ ಹಾದಿಯನ್ನು ಸರಿಸಿ ಜನಸಾಮಾನ್ಯರಿಗೆ ಪತ್ರಿಕೆ ತಲುಪಿಸಬೇಕಾಗುತ್ತದೆ ಎಂದರು. ಪಕ್ಷದ ಕಾರ್ಯ ಚಟುವಟಿಕೆಗಳ ಮೇಲೂ ಬೆಳಕು ಚೆಲ್ಲುವಂತಹ ಕೆಲಸವಾಗಬೇಕು. ನಮ್ಮ ಹಿರಿಯರು ಸರ್ವಸ್ವವನ್ನು ತ್ಯಾಗ ಮಾಡಿ ಪತ್ರಿಕೆ ನಡೆಸಿದ್ದಾರೆ ಎಂದು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಜನತಾ ಪಕ್ಷ ಉದಯವಾಗಿ ಹಲವು ಏಳುಬೀಳುಗಳನ್ನು ಕಂಡಿದೆ. ಅಂದಿನಿಂದ ಇಂದಿನವರೆಗೆ ಆಗಿರುವ ಸರಿತಪ್ಪುಗಳು ಒಳಗೊಂಡ ರಾಜಕೀಯ ಇತಿಹಾಸ ಈ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಲಿವೆ.ಜನರ ಸಮಸ್ಯೆಗಳ ಪರವಾಗಿ ಅಭಿಪ್ರಾಯಗಳನ್ನು ಮೂಡಿಸಲು ಪತ್ರಿಕೆ ಸಹಾಯಕವಾಗಲಿದೆ ಎಂದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಶಾಸಕರು, ಮಾಜಿ ಶಾಸಕರು, ಪಕ್ಷದ ಹಲವು ಮುಖಂಡರು ಪಾಲ್ಗೊಂಡಿದ್ದರು.

Facebook Comments