ನವೆಂಬರ್‌ನಲ್ಲಿ ಜೆಡಿಎಸ್‍ನಿಂದ ಜನತಾ ಸಂಗಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.28- ಮುಂಬರುವ 2023ಕ್ಕೆ ಅಧಿಕಾರಕ್ಕೆ ಬರಬೇಕೆಂಬ ಮಹದಾಸೆ ಹೊಂದಿರುವ ಜೆಡಿಎಸ್ ನವೆಂಬರ್ ಮೊದಲನೆ ವಾರದಲ್ಲಿ ಜನತಾ ಸಂಗಮ ಎಂಬ ಕಾರ್ಯಕ್ರಮ ನಡೆಸಲಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ಬಳಿಯ ತೋಟದಲ್ಲಿ ಈಗಾಗಲೇ ಮೊದಲ ಹಂತದಲ್ಲಿ ಜನತಾ ಪರ್ವ 1.0 ನಡೆಸಿದ್ದು, ಎರಡನೆ ಹಂತದಲ್ಲಿ ಜನತಾ ಸಂಗಮ ನಡೆಸಲಿದೆ.

ಜನತಾ ಪರ್ವ 1.0ನಲ್ಲಿ ಶಾಸಕರಿಗೆ ಹಾಗೂ ಮುಂದಿನ ಚುನಾವಣೆಗೆ ಸ್ರ್ಪಸಲಿರುವ ಆಕಾಂಕ್ಷಿಗಳಿಗೆ ಕಾರ್ಯಾಗಾರ ನಡೆಸಿದ್ದಲ್ಲದೆ ಅವರಿಗೆ ಪ್ರಶ್ನಾವಳಿಗಳನ್ನು ನೀಡಿ ಪಕ್ಷ ಸಂಘಟನೆಯ ಗುರಿ ನಿಗದಿಪಡಿಸಲಾಗಿದೆ. ಜನತಾ ಸಂಗಮ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ನವೆಂಬರ್ ಮೊದಲನೆ ವಾರದಲ್ಲಿ ಎರಡು-ಮೂರು ದಿನಗಳ ಕಾಲ ನಡೆಯಲಿದೆ.

ಶಾಸಕರು, ಜಿಲ್ಲಾ ಹಾಗೂ ತಾಲ್ಲೂಕುವಾರು ಅಧ್ಯಕ್ಷರನ್ನೊಳಗೊಂಡಂತೆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮುಂಬರುವ ಚುನಾವಣೆಗಳ ಸಿದ್ಧತೆ ಕುರಿತಂತೆ ಮಾರ್ಗದರ್ಶನ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡುವುದರ ಜತೆಗೆ ಆಯಾ ಕ್ಷೇತ್ರಗಳಲ್ಲಿ ನಾಯಕತ್ವ ರೂಢಿಸಿಕೊಳ್ಳುವುದು, ಜನಮನ್ನಣೆ ಗಳಿಸಲು ಅನುಸರಿಸಬೇಕಾದ ಕಾರ್ಯವಿಧಾನ, ತಂತ್ರಗಳ ಬಗ್ಗೆ ಸಲಹೆ ನೀಡಲಾಗುತ್ತದೆ.

ಕ್ಷೇತ್ರ, ಜಿಲ್ಲೆ ಹಾಗೂ ತಾಲ್ಲೂಕುವಾರು ಪಕ್ಷದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಯಾವ ರೀತಿ ಚೈತನ್ಯ ತುಂಬಬಹುದು ಎಂಬ ಬಗ್ಗೆ ಅಭಿಪ್ರಾಯ ಪಡೆದು ಪಕ್ಷದ ವರಿಷ್ಠರು ಸಲಹೆ ಮತ್ತು ಮಾರ್ಗದರ್ಶನ ಮಾಡಲಿದ್ದಾರೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ ನಡೆಸಲಾಗಿದ್ದು, ಇನ್ನೂ ದಿನಾಂಕ ನಿಗದಿಪಡಿಸಿಲ್ಲ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ನಾಯಕರು ಉಪಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದರಿಂದ ಜನತಾ ಸಂಗಮ ಸ್ವಲ್ಪ ವಿಳಂಬವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜನತಾ ಪರ್ವದ ಮುಂದುವರೆದ ಭಾಗವಾಗಿ ಜನತಾ ಸಂಗಮ ನಡೆಸಲಿದ್ದು, ಇಲ್ಲೂ ಕೂಡ ಸಂವಾದ ಕಾರ್ಯಕ್ರಮವಿರುತ್ತದೆ. ಜನತಾ ಪರ್ವದಲ್ಲಿ ಶಾಸಕರಲ್ಲದೆ ಮಹಿಳಾ ವಿಭಾಗ, ಯುವ ಜನತಾದಳ ಸೇರಿದಂತೆ ವಿವಿಧ ಘಟಕಗಳ ಮುಖಂಡರ ಜತೆ ಸಂವಾದ ನಡೆಸಲಾಗಿತ್ತು.
ಉಪಚುನಾವಣೆ ಮುಗಿದ ಬಳಿಕ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

Facebook Comments