ಸೋಲಿನ ಪರಾಮರ್ಶೆ ಜೆಡಿಎಲ್‍ಪಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.12- ರಾಜ್ಯ ವಿಧಾನಸಭೆ ಉಪಚುನಾವಣೆ ಸೋಲಿನ ಪರಾಮರ್ಶೆ ನಡೆಸುವ ಉದ್ದೇಶದಿಂದ ಪಕ್ಷದ ಶಾಸಕರು ಹಾಗೂ ಮುಖಂಡರ ಸಭೆಯನ್ನು ಇನ್ನೊಂದು ವಾರದಲ್ಲಿ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳು ವುದರ ಜತೆಗೆ ಪಕ್ಷ ಸಂಘಟನೆ ಮಾಡುವ ಬಗ್ಗೆ ಶಾಸಕರ ಹಾಗೂ ಮುಖಂಡರ ಅಭಿಪ್ರಾಯವನ್ನು ವರಿಷ್ಠರು ಪಡೆಯಲು ನಿರ್ಧರಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲು ಅನುಭವಿಸಿದ್ದು, ಪಕ್ಷದ ಕಾರ್ಯಕರ್ತರು ಆತಂಕಕ್ಕೆ ಒಳಗಾಗಿದ್ದಾರೆ. ಅವರಿಗೆ ಧೈರ್ಯ ತುಂಬಿ ಪಕ್ಷವನ್ನು ಮುನ್ನಡೆಸುವ ಉದ್ದೇಶದಿಂದ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಉದ್ದೇಶಿಸಲಾಗಿದೆ.

ಸಭೆಯಲ್ಲಿ ಉಪಚುನಾವಣೆಗೆ ಸಂಬಂಧಿಸಿದಂತೆ ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಡಲಿದ್ದು, ಶಾಸಕರ ಅಭಿಪ್ರಾಯವನ್ನು ವರಿಷ್ಠರು ಪಡೆಯಲಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಉಪಚುನಾವಣೆ ಸೋಲಿನ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಆ ಸಂದರ್ಭದಲ್ಲಿ ಉಪಚುನಾವಣೆಯಲ್ಲಿ ಜನರು ಪ್ರಜ್ಞಾಪೂರ್ವಕವಾಗಿಯೇ ಸ್ಥಿರ ಸರ್ಕಾರಕ್ಕಾಗಿ ಮತ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನರ್ಹ ಶಾಸಕರನ್ನು ಮಂತ್ರಿ ಮಾಡುವ ಭರವಸೆ ನೀಡಿದ್ದು ಕೂಡ ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗಿ ಜನರ ಒಲವು ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ, ಮತದಾನಕ್ಕೂ ಮುನ್ನ ಮತ್ತೆ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಲಿದೆ ಎಂಬ ಚರ್ಚೆ, ಉಭಯ ಪಕ್ಷಗಳ ನಾಯಕರ ಹೇಳಿಕೆಗಳು ಜನರಲ್ಲಿ ಗೊಂದಲ ಉಂಟುಮಾಡಿದ್ದವು.

ಮತ್ತೆ ಮೈತ್ರಿ ಸರ್ಕಾರದ ಕಹಿ ನೆನಪು ಮರುಕಳಿಸಬಾರದು ಎಂಬ ಉದ್ದೇಶದಿಂದ ಜನರು ಈ ತೀರ್ಪು ನೀಡಿರಬಹುದು ಎಂಬುದು ಸೇರಿದಂತೆ ಸೋಲಿನ ಬಗ್ಗೆ ಹಲವು ದೃಷ್ಟಿಕೋನ ಗಳಿಂದಲೂ ಪರಾಮರ್ಶೆಯನ್ನು ಜೆಡಿಎಸ್ ವರಿಷ್ಠರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಟಸ್ಥ ನಿಲುವು ಅನುಸರಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಡುವ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಶಾಸಕರ, ಮುಖಂಡರ ಅಭಿಪ್ರಾಯ ಪಡೆದು ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ಧಪಡಿಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Facebook Comments