ಆ.20ರಿಂದ ಕಾವೇರಿಯಿಂದ ತುಂಗಭದ್ರಾ ನದಿಯವರೆಗೆ ಜೆಡಿಎಸ್ ಪಾದಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25-ವಿಚಾರ, ವಿಕಾಸ, ವಿಶ್ವಾಸ ಎಂಬ ಧ್ಯೇಯ ವಾಕ್ಯದೊಂದಿಗೆ ಜೆಡಿಎಸ್ ಆ.20ರಿಂದ ಪಾದಯಾತ್ರೆಯನ್ನು ಆರಂಭಿಸಲಿದೆ. ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನವಾದ ಆ.20ರಂದು ನಂಜನಗೂಡಿನಿಂದ ಪಾದಯಾತ್ರೆಯನ್ನು ಪ್ರಾರಂಭಿಸಲಾಗುವುದು ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿಯಿಂದ ತುಂಗಭದ್ರಾ ನದಿಯವರೆಗೆ ಮೊದಲ ಹಂತದಲ್ಲಿ ಪಾದಯಾತ್ರೆಯನ್ನು ಕೈಗೊಳ್ಳಲಾಗುವುದು, ಎರಡನೇ ಹಂತದಲ್ಲಿ ಕೃಷ್ಣೆಯಿಂದ ಮಲಪ್ರಭಾ ನದಿಯವರೆಗೆ ಪಾದಯಾತ್ರೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಪಾದಯಾತ್ರೆಯ ಪೂರ್ವ ಸಿದ್ಧತಾ ಸಭೆ ಜೂ.29ರಂದು ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಸಲಾಗುವುದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪಾದಯಾತ್ರೆಯ ರೂಪುರೇಷೆಗಳನ್ನು ನಿರ್ಧರಿಸಲಾಗುವುದು. ಭಾವನಾತ್ಮಕವಾಗಿ ಮಾರು ಹೋಗಿರುವ ಯುವಕರನ್ನು ಪಕ್ಷ ಸಂಘಟನೆಗೆ ಸಜ್ಜುಗೊಳಿಸುವುದು, ಜೆಡಿಎಸ್ ಕಡೆಗೆ ಯುವ ಸಮುದಾಯವನ್ನು ಸೆಳೆಯುವ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು.

ಪ್ರಮುಖವಾದ ಮೂರು ಧ್ಯೇಯೋದ್ದೇಶ ಗಳನ್ನು ಗುರಿಯಾಗಿಟ್ಟುಕೊಂಡು ಪಾದ ಯಾತ್ರೆ ನಡೆಸಲಾಗುತ್ತಿದೆ. ವಿಚಾರ ಎಂದರೆ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿದ್ದಾಗ ನಾಡಿನ ಹಿತಾಸಕ್ತಿ ಕಾಪಾಡಲು ಮಾಡಿರುವ ಪ್ರಯತ್ನಗಳನ್ನು ಜನರಿಗೆ ಮನದಟ್ಟು ಮಾಡಿಕೊಡುವುದು. ರಾಜ್ಯದ ಅಭಿವದ್ಧಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿರಬೇಕು. ಅದು ಅನಿವಾರ್ಯ ಎಂಬುದನ್ನು ಜನರ ಮನಸ್ಸಿನಲ್ಲಿ ಬೇರೂರಿಸಲಾಗುವುದು ಎಂದರು.

ವಿಕಾಸ ಎಂದರೆ ಕರ್ನಾಟಕದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತಂದರೂ ಕೇಂದ್ರ ಸರ್ಕಾರದ ಮಲತಾಯಿ ದೋರಣೆಯಿಂದಾಗಿ ಅವು ಈಡೇರದೇ ಇರುವುದು. ಆದರೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ದಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿವೆ.

ಅಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಿನ್ನಡೆ ಯಾಗದಿರುವುದನ್ನು ಜನರ ಗಮನಕ್ಕೆ ತಂದು ಕನ್ನಡ ನಾಡಿನ ಸ್ವಾಭಿಮಾನ, ಅಸ್ಮಿತೆಯ ಉಳಿವಿಗಾಗಿ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಪ್ರತಿಪಾ ದಿಸುವುದಾಗಿದೆ. ನಮ್ಮ ಪಕ್ಷ ಕನ್ನಡ ನಾಡಿನ ಅಭಿವೃದ್ಧಿಗಾಗಿ ಹಿಂದೆ ಮಾಡಿರುವ, ಮಾಡುತ್ತಿರುವ, ಮುಂದೆ ಅದಕ್ಕೆ ಕಟಿಬದ್ಧವಾಗಿರುವ ವಿಚಾರವನ್ನು ಜನರಿಗೆ ತಲುಪಿಸುವುದಾಗಿದೆ.

ವಿಶ್ವಾಸ ಎಂದರೆ ಧ್ಯೇಯವಾಕ್ಯದಲ್ಲಿ ಇದುವರೆಗೆ ಪಕ್ಷದಲ್ಲಿ ಆಗಿರುವ ತಪ್ಪು ಒಪ್ಪುಗಳನ್ನು ಮನ್ನಿಸುವಂತೆ ಜನರೊಂದಿಗೆ ಬೆರೆತು ಪಕ್ಷ ಸಂಘಟನೆ ಮಾಡುವುದು. ಪಕ್ಷದ ಸಕಾರಾತ್ಮಕ ಅಂಶಗಳನ್ನು ಜನರಲ್ಲಿ ಮನದಟ್ಟಾಗುವಂತೆ ಪ್ರಚುರ ಪಡಿಸಿ ಪ್ರಾದೇಶಿಕ ಪಕ್ಷ ಇಲ್ಲದಿದ್ದರೆ ಭವಿಷ್ಯದಲ್ಲಿ ಎದುರಾಗುವ ಅಪಾಯಗಳ ಬಗ್ಗೆ ಜನ ಜಾಗೃತಿ ಮೂಡಿಸುವುದಾಗಿ ವಿವರಿಸಿದರು.

Facebook Comments