ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ಕೆ.ಕೆ, ಕಾರ್ಯಾಧ್ಯಕ್ಷರಾಗಿ ಮಧು, ನಿಖಿಲ್‍ಗೆ ಯುವ ಘಟಕ ಸಾರಥ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4- ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಮಧುಬಂಗಾರಪ್ಪ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಕಟಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಾವು ತುಮಕೂರಿನಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಅದರ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷರಾಗಿದ್ದ ಶಾಸಕ ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಎಚ್.ಕೆ.ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದರು. ಮಧುಬಂಗಾರಪ್ಪ ಅವರಿಗೆ ಪಕ್ಷಕ್ಕಾಗಿ ದುಡಿಯುವ ಛಲವಿದೆ. ಅವರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದೇವೆ.

ಖಾನಾಪುರದ ನಾಸಿರ್ ಭಗವಾನ್ ಅವರನ್ನು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಯುವ ಘಟಕದ ಅಧ್ಯಕ್ಷರನ್ನಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ನೇಮಿಸಲಾಗಿದೆ ಎಂದರು.  ಯುವ ಘಟಕದ ಅಧ್ಯಕ್ಷರನ್ನಾಗಿ ಶರಣುಗೌಡ ಪಾಟೀಲ್ ಅವರನ್ನು ನೇಮಿಸಲು ಉದ್ದೇಶಿಸಲಾಗಿತ್ತು.

ಆದರೆ ಸ್ವತಃ ಶರಣುಗೌಡ ಪಾಟೀಲ್ ಅವರು ನಿಖಿಲ್ ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಾಯಿಸಿದ್ದರಿಂದ ಅವರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಎಚ್.ವಿಶ್ವನಾಥ್ ಅಧಿಕಾರ ಹಸ್ತಾಂತರಿಸಿದರು.  ಉಳಿದಂತೆ ಹಿರಿಯ ಉಪಾಧ್ಯಕ್ಷರಾಗಿ ಮಾಜಿ ಸಚಿವ ಎನ್.ಎಂ.ನಬಿ, ಶಾಸಕ ಕೆ.ಗೋಪಾಲಯ್ಯ, ಉಪಾಧ್ಯಕ್ಷರಾಗಿ ಆರ್.ಮಂಜುನಾಥ್, ಯುವ ಜೆಡಿಎಸ್ ಅಧ್ಯಕ್ಷರಾಗಿ ನಿಖಿಲ್ ಕುಮಾರಸ್ವಾಮಿ, ಕಾರ್ಯಾಧ್ಯಕ್ಷರಾಗಿ ಎನ್.ಎಂ.ನೂರ್ ಅಹಮ್ಮದ್, ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಶರಣ್‍ಗೌಡ ಕಂದಕೂರ್, ಹಿರಿಯ ಉಪಾಧ್ಯಕ್ಷರಾಗಿ ನರಸಿಂಹಮೂರ್ತಿ, ರಾಜ್ಯ ಬೂತ್ ಸಮಿತಿ ಅಧ್ಯಕ್ಷರಾಗಿ ಸಿ.ಬಿ.ಸುರೇಶ್‍ಬಾಬು ಆಯ್ಕೆಯಾಗಿದ್ದಾರೆ.

Facebook Comments