ಯಾರ ಜೊತೆಗೂ ಹೊಂದಾಣಿಕೆ ಇಲ್ಲ, ನಮ್ಮನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ : ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.4- ಮುಂಬರುವ ಯಾವುದೇ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.  ಜೆಡಿಎಸ್ ಕಚೇರಿ ಜೆಪಿಭವನದಲ್ಲಿಂದು ನಡೆದ ಯುವ ಮತ್ತು ವಿದ್ಯಾರ್ಥಿ ಜನತಾದಳ ವಿಭಾಗಗಳ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಯುವ ಮುಖಂಡರ ಸಂಘಟನಾ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಜೆಡಿಎಸ್ ಸ್ವತಂತ್ರವಾಗಿ ಎದುರಿಸಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಏನೆಂಬುದು ನಮಗೆ ಗೊತ್ತಿದೆ. ಈ ಎರಡೂ ಪಕ್ಷಗಳು ಜೆಡಿಎಸ್ ಅಸ್ತಿತ್ವವೇ ಮುಗಿದು ಹೋಯ್ತು ಎಂದು ಅಪಪ್ರಚಾರ ಮಾಡುತ್ತಿವೆ. ಯಾರೂ ನಮ್ಮನ್ನು ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಬೆಂಬಲದಿಂದಲೇ ಜೆಡಿಎಸ್‍ನಲ್ಲಿ ಪ್ರಧಾನಿ, ಮುಖ್ಯಮಂತ್ರಿಯಾಗಿದ್ದು ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೇನು ಅರ್ಜಿ ಹಾಕಿಕೊಂಡು ಹೋಗಿರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅವರ ಬಳಿ ತಮ್ಮನ್ನು ಪ್ರಧಾನಿ ಮಾಡಿ ಎಂದು ಕಾಂಗ್ರೆಸ್‍ನವರ ಮನೆಬಾಗಿಲಿಗೆ ಹೋಗಿದ್ದರೇ? ಎಂದು ಪ್ರಶ್ನಿಸಿದರು.

ನಾವ್ಯಾರು ಅವರ ಮನೆ ಬಳಿ ಎಂದೂ ಹೋದವರಲ್ಲ. ಅವರಾಗಿಯೇ ನಮ್ಮ ಮನೆಗೆ ಬಂದಿದ್ದಾರೆ. ನಮಗೆ ಸ್ವಾತಂತ್ರವನ್ನು ತಂದುಕೊಟ್ಟ ಮೂಲ ಕಾಂಗ್ರೆಸ್ ಬಗ್ಗೆ ಮಾತನಾಡಿಲ್ಲ. ಆ ಕಾಂಗ್ರೆಸ್‍ನ ಸಾಲು ಬಗ್ಗೆ ತುಂಬ ಗೌರವವಿದೆ. ಈಗಿರುವ ಕಾಂಗ್ರೆಸ್ ಸಾಲಿನ ಕುರಿತು ಮಾತನಾಡಿದ್ದೇನೆ. ಈಗಿರುವುದು ಶಿವಕುಮಾರ್, ಸಿದ್ದರಾಮಯ್ಯನವರ ಸಾಲು. ಇವರಿಂದ ನಾನೇನು ಸಿಎಂ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಗ್ರಾಪಂ ಚುನಾವಣೆಗೂ ಮುನ್ನ ಗ್ರಾಮ ಸ್ವರಾಜ್ಯ ಮಾಡಿದ್ದರು. ಹಣ ಬಲದಿಂದಲೇ ಚುನಾವಣೆ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಅವರದೇ ಪಕ್ಷದ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದರು.  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಯಾವತ್ತೂ ಭೇಟಿ ಮಾಡಿಲ್ಲ. ಶಾಸಕರ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಭೇಟಿ ಸಂದರ್ಭದಲ್ಲಿ ರಾಜಕೀಯವಾಗಿ ಚರ್ಚೆ ನಡೆಸಿಲ್ಲ. ಜೆಡಿಎಸ್‍ಗೆ ದೊಡ್ಡ ಪಡೆಯೇ ಇದೆ. ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಹಿನ್ನೆಲೆ ಏನೆಂಬುದು ಗೊತ್ತಾಗಿದೆ. ಬಿಜೆಪಿ, ಕಾಂಗ್ರೆಸ್ ನಾಯಕರು ಗ್ರಾಮ ಪಂಚಾಯ್ತಿಯಲ್ಲಿ ನಮ್ಮವರೇ ಹೆಚ್ಚು ಗೆದ್ದಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾವು ಹಾಗೆ ಹೇಳುವುದಿಲ್ಲ. ಸಂಕ್ರಾಂತಿ ಬಳಿಕ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಬೇಕಿದೆ. ತಳಹಂತದಿಂದಲೂ ಪಕ್ಷವನ್ನು ಸಂಘಟನೆ ಮಾಡಬೇಕಿದೆ. ಅದಕ್ಕಾಗಿ ಯುವ ಮುಖಂಡರ ಸಭೆಯನ್ನು ನಡೆಸುತ್ತಿರುವುದಾಗಿ ಹೇಳಿದರು.

ದೇವೇಗೌಡರು ಕರ್ನಾಟಕ ಬಿಟ್ಟು ದೆಹಲಿಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‍ನವರೇ ಬಂದು ಗೋಗರಿದಿದ್ದರು. ಅದೇ ರೀತಿ ನಮ್ಮ ಮನೆ ಬಾಗಿಲುಗೂ ಬಂದು ನನ್ನನ್ನು ಮುಖ್ಯಮಂತ್ರಿ ಮಾಡಿದರು ಎಂದರು.

Facebook Comments