ಲಾಕ್‌ಡೌನ್‌ ಹಿನ್ನಲೆಯಲ್ಲಿ ಜೆಡಿಎಸ್ ಸಭೆಗಳು ರದ್ದು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.14- ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳ ಸಿದ್ಧತೆ ಕುರಿತಂತೆ ಜೆಡಿಎಸ್ ನಾಯಕರು ಆರಂಭಿಸಿದ್ದ ಸಭೆಗಳನ್ನು ರದ್ದು ಪಡಿಸಿದ್ದಾರೆ. ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಈ ವಾರ ನಡೆಸಬೇಕಿದ್ದ ಜಿಲ್ಲಾವಾರು ಸಭೆಗಳನ್ನು ಮುಂದೂಡಲಾಗಿದೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ನೇತೃತ್ವದಲ್ಲಿ ಕಳೆದ ವಾರ ಪಕ್ಷದ ಮುಖಂಡರ ಸಭೆಗಳನ್ನು ಆರಂಭಿಸಲಾಗಿತ್ತು. ಈಗಾಗಲೇ ಬೆಂಗಳೂರು ನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮುಖಂಡರ ಸಭೆಯನ್ನು ನಡೆಸಲಾಗಿತ್ತು.

ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ಪಕ್ಷದ ಮುಖಂಡರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಬೆಂಗಳೂರು ನಗರ‌ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಅವರನ್ನೊಳಗೊಂಡಂತೆ ಬೆಂಗಳೂರು ನಗರದ ಪಕ್ಷದ ಮುಖಂಡರೊಂದಿಗೆ ಕಳೆದ ವಾರ ಸಭೆ ನಡೆಸಿ ಮುಂಬರುವ ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಗೌಡರು ಸಲಹೆ ಮಾಡಿದ್ದರು. ಅಲ್ಲದೆ ಸದಸ್ಯತ್ವ ನೊಂದಣಿ ಸೇರಿದಂತೆ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸೂಚಿಸಿದ್ದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನಪರ ಹೋರಾಟ ರೂಪಿಸುವ ಬಗ್ಗೆಯೂ ಸಮಾಲೋಚನೆ ಮಾಡಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.ನಿನ್ನೆ ನಡೆಯಬೇಕಾಗಿದ್ದ ಬೆಂಗಳೂರು ನಗರ ವಾರ್ಡ್ ಅಧ್ಯಕ್ಷರ ಸಭೆಯನ್ನು ರದ್ದು ಪಡೆಸಲಾಯಿತು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಪಕ್ಷದ ನಾಯಕರು ಘೋಷಣೆ ಮಾಡಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಕೊರೊನಾ ನಿಯಂತ್ರಣ, ಚಿಕಿತ್ಸೆ ಕುರಿತಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ.

ಈ ವಾರದಲ್ಲೂ ಒಂದೊಂದು ಜಿಲ್ಲೆಯ ಮುಖಂಡರೊಂದಿಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಸಭೆ ನಡೆಸಲು ಉದ್ದೇಶಿಸಲಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

Sri Raghav

Admin