ಸಿಎಂ ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಜೆಡಿಎಸ್ ಶಾಸಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.12-ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮಂಡ್ಯ ಜಿಲ್ಲೆಯ ನಾಗಮಂಗಲದ ಜೆಡಿಎಸ್ ಶಾಸಕ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪ್ರಸಂಗ ಇಂದು ಆದಿಚುಂಚನಗಿರಿಯಲ್ಲಿ ನಡೆಯಿತು.  ನಾಗಮಂಗಲದ ಆದಿಚುಂಚನಗಿರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಹೆಲಿಕಾಪ್ಟರ್ ಮೂಲಕ ತೆರಳಿದ್ದರು.

ಆದಿಚುಂಚನಗಿರಿ ಶ್ರೀ ಕ್ಷೇತ್ರಕ್ಕೆ ಬಂದು ಕಾರಿನಿಂದ ಇಳಿಯುತ್ತಿದ್ದಂತೆ ಸ್ಥಳೀಯ ಶಾಸಕರು ಆಗಿರುವ ಸುರೇಶ್ ಗೌಡ ಹೂವಿನ ಹಾರ ಹಾಕಿ ಕಾಲಿಗೆ ಬಿದ್ದು ನಮಸ್ಕರಿಸಿದರು. ಈಗಾಗಲೇ ಜೆಡಿಎಸ್‍ನ ಆಂತರಿಕ ಬೆಳವಣಿಗೆಗಳಿಂದ ಮುನಿಸಿಕೊಂಡಿರುವ ಅನೇಕ ಶಾಸಕರು ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಸುರೇಶ್ ಗೌಡ ಸಿಎಂ ಅವರನ್ನು ತಮ್ಮ ತವರಿನಲ್ಲಿ ಆತ್ಮೀಯವಾಗಿ ಬರಮಾಡಿಕೊಂಡಿರುವುದು ವದಂತಿಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ. ಈ ಹಿಂದೆಯೇ ಆಪರೇಷನ್ ಕಮಲದ ಖೆಡ್ಡಾದಲ್ಲಿ ಸುರೇಶ್‍ಗೌಡ ಹೆಸರು ಕೇಳಿಬಂದಿತ್ತು. ಸ್ವತಃ ಅವರೇ ಇದನ್ನು ಬಹಿರಂಗಪಡಿಸಿದ್ದರು. ನಂತರ ನಡೆದ ಕೆಲವು ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಇದೀಗ ಇತ್ತೀಚೆಗೆ ಮುಕ್ತಾಯಗೊಂಡ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿರುವುದು ಪಕ್ಷದೊಳಗೆ ತಳಮಳ ಸೃಷ್ಟಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂದು ಅರಿತಿರುವ ಶಾಸಕರು ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.

Facebook Comments