ಜೈಲಿನಲ್ಲಿ ಎಲ್ಲವೂ ಸಿಗುತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ಹೊರಜಗತ್ತಿನಲ್ಲಿ ಸಿಗುವ ಎಲ್ಲ ವಸ್ತುಗಳು ಜೈಲಿನಲ್ಲೇ ಸಿಗುತ್ತವೆ. ಜೈಲಿನಿಂದಲೇ ಕರೆ ಮಾಡಿ ಹಣ ನೀಡುವಂತೆ ಕೇಳುತ್ತಾರೆ ಎಂದು ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದರು. ಶಾಸನ ರಚನಾ ಕಲಾಪದಲ್ಲಿ 2021ನೇ ಸಾಲಿನ ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿಯ ವಿಧೇಯಕ ಕುರಿತು ಮಾತನಾಡಿದ ಅವರು, ಮಾದಕವಸ್ತು, ಮೊಬೈಲ್, ಮದ್ಯ, ಇಸ್ಪೀಟ್ ಎಲೆ ಸೇರಿದಂತೆ ಹೊರಜಗತ್ತಿನಲ್ಲಿ ಸಿಗುವ ಎಲ್ಲ ವಸ್ತುಗಳು ಜೈಲಿನಲ್ಲಿ ಸಿಗುತ್ತಿದೆ. ಜೈಲಿಗೆ ಹೋದವರು ಹಣ ನೀಡುವಂತೆ ಫೋನ್ ಮಾಡುತ್ತಾರೆ.

ಹೊರಗಡೆ ಇದ್ದರೆ ಏನೂ ಸಿಗೊಲ್ಲ ಎಂಬ ಭಾವನೆ ಇದೆ. ಅಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಖೈದಿಗಳಿಗೆ ಹೊರಗಿನ ವಸ್ತುಗಳನ್ನು ಕೊಡುತ್ತಾರೆ ಎಂದು ಆರೋಪಿಸಿದರು. ಜೈಲಿನಲ್ಲಿದ್ದುಕೊಂಡೇ ಹೊರಗಿನ ವ್ಯಕ್ತಿಗಳನ್ನು ಕೊಲೆ ಮಾಡಿಸುತ್ತಿದ್ದಾರೆ ಎಂದು ಜೈಲಿನ ಲೋಪದೋಷಗಳನ್ನು ಪ್ರಸ್ತಾಪಿಸಿದರು.

ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮಾತನಾಡಿ, ಜೈಲಿನಲ್ಲಿ ಖೈದಿಗಳ ಮನಪರಿವರ್ತನೆಯಾಗುತ್ತಿಲ್ಲ. ಜೈಲಿನಿಂದಲೇ ಹೊರಗಿನ ವ್ಯಕ್ತಿಗಳೊಂದಿಗೆ ಮಾತನಾಡುತ್ತಿದ್ದಾರೆ. ಅವರನ್ನು ಕಿದ್ವಾಯಿ, ನಿಮ್ಹಾನ್ಸ್‍ನಂತಹ ಆಸ್ಪತ್ರೆಗಳಿಗೆ ಹಾಕಿದರೆ ಮನಪರಿವರ್ತನೆಯಾಗಬಹುದು. ಜೈಲಿನಲ್ಲಿ ಹಿಂದು-ಮುಸ್ಲಿಂ ಖೈದಿಗಳನ್ನು ಪ್ರತ್ಯೇಕ ಮಾಡದೆ ಒಟ್ಟಿಗೆ ಇರುವಂತೆ ಮಾಡಬೇಕು. ಜೈಲಿನಲ್ಲಿ ಕ್ರಿಮಿನಲ್‍ಗಳನ್ನು ಭೇಟಿ ಮಾಡುವವರ ಮೇಲೆ ನಿಗಾ ಇಡಬೇಕು ಎಂದು ಸಲಹೆ ಮಾಡಿದರು.

ಮಾಜಿ ಸ್ಪೀಕರ್ ಕೆ.ಜೆ.ಬೋಪಯ್ಯ ಮಾತನಾಡಿ, ಈ ಮಂಡಳಿಯಲ್ಲಿ ಅಧಿಕಾರಿಗಳೇ ಇದ್ದರೆ ಉದ್ದೇ ಈಡೇರೊಲ್ಲ. ಸರ್ಕಾರ ನಾಮನಿರ್ದೇಶನ ಮಾಡುವಂತಿರಬೇಕು. ಕ್ಯಾಂಟೀನ್ ನಡೆಸಲು ಹೇಗೆ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಅಮೆರಿಕದಲ್ಲಿ ಖೈದಿಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯೂ ಅಧಿಕವಾಗಿ ಆಗುತ್ತಿದೆ. ಖೈದಿಗಳ ಮಾನವ ಹಕ್ಕುಗಳನ್ನು ಕಾಪಾಡು ವಂತಾಗಬೇಕು ಎಂದರು.

ಶಾಸಕ ಶಿವಲಿಂಗೇಗೌಡ ಮಾತನಾಡಿ, ಈ ವಿಧೇಯಕ ತಂದಿರುವುದು ಒಳ್ಳೆಯದು. ಜೈಲಿಗೆ ಹೋದವರು ಕುಡಿಯುವುದನ್ನು ಕಲಿಯುತ್ತಾರೆ. ಪರಿಶುದ್ಧರಾಗಿ ಜೈಲಿನಿಂದ ಹೊರಬರುವಂತಾಗಬೇಕು, ಸಾಮಾನ್ಯ ಖೈದಿಗಳು, ಕ್ರಿಮಿನಲ್ ಖೈದಿಗಳನ್ನು ಪ್ರತ್ಯೇಕವಾಗಿ ಇಡಬೇಕು ಎಂದು ಸಲಹೆ ಮಾಡಿದರು. ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು. ಜೈಲಿನಲ್ಲಿ ಹೊರಗೆ ಉದ್ಯೋಗ ಸಿಗದಿದ್ದರೂ ಜೈಲಿನೊಳಗೆ ಉದ್ಯೋಗ ಸಿಗುತ್ತದೆ ಎಂಬುದು ಖಾತ್ರಿಯಾಯಿತು ಎಂದರು.

ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಜೈಲುಗಳು ಸುಧಾರಣೆಯಾಗಬೇಕು. ಜೈಲಿನ ಒಳಗೆ, ಹೊರಗಿನ ಎಲ್ಲಾ ವಸ್ತುಗಳು ಸಿಗುತ್ತಿದೆ. ಅದನ್ನು ತಪ್ಪಿಸಬೇಕು. ಖೈದಿಗಳಿಗೆ ನೀಡುವ ದುಡಿಮೆ ಹಣವನ್ನು ಹೆಚ್ಚಿಸಬೇಕು ಎಂದರು.

Facebook Comments