ಹಕ್ಕುಚ್ಯುತಿಗೆ ಅವಕಾಶ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ : ಸಾ.ರಾ.ಮಹೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.15-ಹಕ್ಕುಚ್ಯುತಿ ಪ್ರಸ್ತಾವನೆಗೆ ಅವಕಾಶ ಕೊಡದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ವಿಧಾನಸಭೆಯಲ್ಲಿ ಬೆದರಿಕೆ ಹಾಕಿದ ಪ್ರಸಂಗ ಜರುಗಿತು.  ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸಾ.ರಾ.ಮಹೇಶ್ ಮನವಿ ಮಾಡಿದರು.

ನಿಮ್ಮ ಹಕ್ಕುಚ್ಯುತಿಯನ್ನು ಗಮನಿಸಿದ್ದೇನೆ. ಅದಕ್ಕೆ ನಾನು ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಧ್ಯಕ್ಷರು ಹೇಳಿದರು. ಅದಕ್ಕೆ ಮತ್ತೆ ಜೆಡಿಎಸ್‍ನ ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಡಾ.ಅನ್ನದಾನಿ, ಪುಟ್ಟರಾಜು ಸೇರಿದಂತೆ ಮತ್ತಿತರರು ಆಕ್ಷೇಪಿಸಿ ಚರ್ಚೆಗೆ ಅವಕಾಶ ಕೊಡಬೇಕೆಂದು ಒತ್ತಾಯಿಸಿದರು. ಇದು ನನ್ನ ಹಕ್ಕುಚ್ಯುತಿಯ ಪ್ರಶ್ನೆ. ನನಗೆ ಸದನದಲ್ಲಿ ಚರ್ಚೆಗೆ ಅವಕಾಶ ಕೊಡದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸಾ.ರಾ.ಮಹೇಶ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು.

ನಾನು ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿಲ್ಲ. ನಾಳೆ ಅಥವಾ ನಾಡಿದ್ದು ಕೊಡುತ್ತೇನೆ ಎಂದು ಹೇಳಿದ್ದೇನೆ. ನೀವು ಇಂಥ ಸಮಯಕ್ಕೆ ಕೊಡಬೇಕೆಂದು ಸ್ಪೀಕರ್‍ಗೆ ಹೇಳುವುದು ಸರಿಯಲ್ಲ ಎಂದು ಸಭಾಧ್ಯಕ್ಷರು ಆಕ್ಷೇಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ಕೊಡಬೇಕೆಂದು ಸ್ಪೀಕರ್‍ಗೆ ಮನವಿ ಮಾಡಿದರು. ಇದಕ್ಕೆ ಸಭಾಧ್ಯಕ್ಷರು ಸಮ್ಮತಿಸಿದ್ದರಿಂದ ಜೆಡಿಎಸ್ ಸದಸ್ಯರು ಪ್ರತಿಭಟನೆಯನ್ನು ಕೈಬಿಟ್ಟರು.

# ಅರ್ಧಗಂಟೆ ಚರ್ಚೆಗೆ ಅವಕಾಶ:
ಮತ್ತೊಂದೆಡೆ ಜೆಡಿಎಸ್‍ನ ಡಾ.ಅನ್ನದಾನಿ ಅವರು ಮಂಡ್ಯ ಜಿಲ್ಲೆ ಮೈ ಶುಗರ್ ಕಾರ್ಖಾನೆ ಖಾಸಗೀಕರಣ ಕುರಿತಂತೆ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ಶತಮಾನಗಳ ಇತಿಹಾಸವುಳ್ಳ ಐತಿಹಾಸಿಕ ಮೈ ಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ. ಇದನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸದೆ ಸರ್ಕಾರದ ಸ್ವಾಮ್ಯದಲ್ಲೇ ನಡೆಯಬೇಕೆಂದು ಒತ್ತಾಯಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಬಜೆಟ್‍ನಲ್ಲಿ 100 ಕೋಟಿ ಅನುದಾನವನ್ನು ನೀಡಿದ್ದರು. ಈ ಸಕ್ಕರೆ ಕಾರ್ಖಾನೆಗೂ, ಮಂಡ್ಯಕ್ಕೂ ಅವಿನಾಭಾÀವ ಸಂಬಂಧವಿದೆ. ರೈತರು ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ಚರ್ಚೆಗೆ ಅವಕಾಶ ಕೊಡಬೇಕೆಂದು ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು.
ಅನ್ನದಾನಿ ಅವರ ಮಾತಿಗೆ ಜೆಡಿಎಸ್‍ನ ಡಿ.ಸಿ.ತಮ್ಮಣ್ಣ , ಪುಟ್ಟರಾಜು ಸೇರಿದಂತೆ ಮತ್ತಿತರರು ದನಿಗೂಡಿಸಿದರು. ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್ ಹೇಳಿದರು.

Facebook Comments