`ಅತೃಪ್ತ ಜೆಡಿಎಸ್’ ಶಾಸಕರ ಮನವೊಲಿಕೆ ಹರಸಾಹಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರ ಮನವೊಲಿಸಲು ತೀರ್ಮಾನಿಸಲಾಗಿದೆ.ಮಾಜಿ ಸಚಿವ ಎಚ್. ವಿಶ್ವನಾಥ್, ಶಾಸಕರಾದ ಗೋಪಾಲಯ್ಯ, ನಾರಾಯಣಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ನ ಖಾಸಗಿ ಹೊಟೇಲ್‍ನಲ್ಲಿ ಬೀಡುಬಿಟ್ಟಿದ್ದಾರೆ.

ಅವರ ಮನವೊಲಿಸಿ ಬೆಂಗಳೂರಿಗೆ ಕರೆತಂದು ರಾಜೀನಾಮೆ ವಾಪಸ್ ಪಡೆಯುವಂತೆ ಮಾಡುವ ಪ್ರಯತ್ನವನ್ನು ಜೆಡಿಎಸ್ ನಾಯಕರು ಮಾಡಲಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ನಡೆದ ಶಾಸಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಮುಂದುವರಿಸಬೇಕು. ನಾಯಕತ್ವ ಬದಲಾವಣೆಗೆ ಒಪ್ಪದೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವದಲ್ಲೇ ಮುಂದುವರಿಯಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ಪಕ್ಷದ ಎಲ್ಲ ಶಾಸಕರೂ ಒಗ್ಗಟ್ಟಿನಿಂದಿದ್ದು, ಮತ್ತೆ ಆಪರೇಷನ್ ಕಮಲಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಲು ಜೆಡಿಎಸ್ ವರಿಷ್ಠರು ತಮ್ಮ ಶಾಸಕರಿಗೆ ಸಲಹೆ ಮಾಡಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರೊಂದಿಗಿನ ಮಾತುಕತೆ ಮುಂದುವರಿದಿದ್ದು, ಒಂದು ವೇಳೆ ಸಚಿವ ಸ್ಥಾನ ತ್ಯಾಗ ಮಾಡುವ ಸಂದರ್ಭ ಬಂದರೂ ಸಿದ್ಧವಾಗಿರಬೇಕು ಎಂಬ ಸಂದೇಶ ನೀಡಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಅತೃಪ್ತ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಸಂಕಷ್ಟದಲ್ಲಿದ್ದು, ನಮ್ಮ ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನವನ್ನು ನಾವು ಮಾಡುತ್ತೇವೆ. ಕಾಂಗ್ರೆಸ್‍ನ ಅತೃಪ್ತ ಶಾಸಕರ ಮನವೊಲಿಸಿ ರಾಜೀನಾಮೆ ಹಿಂಪಡೆಯುವ ಪ್ರಯತ್ನವನ್ನು ಆ ಪಕ್ಷದ ನಾಯಕರು ಮಾಡಲಿದ್ದಾರೆ.

ಮುಂದೆ ಯಾವುದೇ ಪರಿಸ್ಥಿತಿ ಎದುರಾದರೂ ಯಾರೂ ವಿಚಲಿತರಾಗದೆ ದೃಢ ಮನಸ್ಸಿನಿಂದ ಎದುರಿಸಬೇಕು. ಸಾಧ್ಯವಿರುವ ಎಲ್ಲ ಮಾರ್ಗೋಪಾಯಗಳನ್ನು ಬಳಸಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಕೊನೆಗಳಿಗೆವರೆಗೂ ಮಾಡುವುದಾಗಿ ವರಿಷ್ಠರು ತಿಳಿಸಿದ್ದಾರೆ ಎನ್ನಲಾಗಿದೆ.

Facebook Comments