ಸಾ.ರಾ.ಮಹೇಶ್ ಮೇಲೆ ಕಿಡಿಕಾರಿದ ಎಚ್.ವಿಶ್ವನಾಥ್..!

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜೂ.1- ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಟಿಕೆಟ್ ನೀಡದ ಬಗ್ಗೆ ಸಚಿವ ಸಾ.ರಾ.ಮಹೇಶ್ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ಕೆ.ಆರ್.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದವರಿಗೆ ಟಿಕೆಟ್ ನೀಡದೆ ಧಿಕ್ಕರಿಸಿದ್ದರು. ನಮ್ಮನ್ನಾಳುವುದು ಜಾತಿ, ಧರ್ಮ, ಅಧಿಕಾರ ಅಂತಸ್ತು ಅಲ್ಲ. ಹಣದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ. ಮನಸ್ಸು ಮುಖ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರದಲ್ಲಿ ಒಂದೇ ಜಾತಿಯವರು ಇರುವುದಿಲ್ಲ. ಬೇರೆ ಬೇರೆ ಜಾತಿಯವರು ಇರುತ್ತಾರೆ. ಎಲ್ಲರೂ ಮತ ಹಾಕಿದರೆ ಮಾತ್ರ ಗೆಲ್ಲಲು ಸಾಧ್ಯ.
ನಮ್ಮ ಮಾತನ್ನು ಧಿಕ್ಕರಿಸಿ ಟಿಕೆಟ್ ನೀಡಲಾಗಿದೆ. ಕುರುಬ ಸಮುದಾಯವನ್ನು  ದಮನ ಮಾಡುವ ಕೆಲಸ ನಡೆಯುತ್ತಿದೆ. ರಾಜ್ಯಾಧ್ಯಕ್ಷನಾಗಿದ್ದರೂ ನಾನು ಶಿಫಾರಸು ಮಾಡಿದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ. ಈ ದುರಾಹಂಕಾರಕ್ಕೆ ಸೋಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣವಿಲ್ಲದೆ ಬೀದಿಯಲ್ಲಿ ಸ್ನಾನ ಮಾಡುತ್ತಿದ್ದವರು ಇಂದು ಎಂಪಿಯಾಗಿದ್ದಾರೆ. ಹಣದಿಂದ ಜನರನ್ನು ಅಳೆಯಬೇಡಿ. ಸಾ.ರಾ.ಮಹೇಶ್ ಇನ್ನೂ ಚಿಕ್ಕವರಿದ್ದಾರೆ. ಸಾಕಷ್ಟು ತಿಳಿದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ನಾನು ಸೂಚಿಸಿದವರಿಗೆ ಟಿಕೆಟ್ ನೀಡಿಲ್ಲ. ಬದಲಾಗಿ ಅವರು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳು ಸೋಲು ಕಾಣುವಂತಾಗಿದೆ. ಕೆ.ಆರ್.ನಗರದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಟಿಕೆಟ್ ಹಂಚಿಕೆಯ ಲೋಪಗಳೇ ಕಾರಣವಾಗಿದೆ ಎಂದು ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

Facebook Comments