ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಿ : ನಿಖಿಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.8- ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಕೋಲಾರ ಜಿಲ್ಲಾಯ ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದವರಾಗಲಿ, ಬೇರೆ ಪಕ್ಷದವರಾಗಿರಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಿ. ನಾನು ಒಬ್ಬ ನಾಗರಿಕನಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

ಕೆಆರ್‍ಎಸ್ ಜಲಾಶಯಕ್ಕೆ ಅದರದ್ದೇ ಆದ ಇತಿಹಾಸ ಇದೆ. ರಾಜರು ತಮ್ಮ ಒಡವೆಗಳನ್ನು ಅಡವಿಟ್ಟು ಡ್ಯಾಂ ನಿರ್ಮಾಣ ಮಾಡಿದ್ದಾರೆ. ಅಂತಹ ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಹೇಳಿದರೆ ಜನರಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಜನರಲ್ಲಿ ಗೊಂದಲ ಸೃಷ್ಟಿಸುವ ರೀತಿಯಲ್ಲಿ ಸಂಸದರು ಮಾತನಾಡುವುದು ಸರಿಯಲ್ಲ. ಡ್ಯಾಂ ಬಿರುಕು ಬಿಟ್ಟಿದ್ದರೆ ಟೆಕ್ನಿಕಲ್ ಟೀಂ ಇರುತ್ತೆ, ಸರ್ಕಾರ ಇದೆ. ಅವರು ಇದರ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಿದರು.

ಚುನಾವಣೆ ಅಂದ ಮೇಲೆ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ನನ್ನ ಸೋಲನ್ನು ನಾನು ಒಪ್ಪಿಕೊಂಡಿದ್ದೇನೆ. ಮಂಡ್ಯದಲ್ಲಿ ಐದು ಮುಕ್ಕಾಲು ಲಕ್ಷ ಜನರು ನನಗೆ ಮತ ಹಾಕಿದ್ದಾರೆ. ಅದು ಸಣ್ಣ ಸಂಖ್ಯೆ ಅಲ್ಲ, ಬೇಜರು ಮಾಡಿಕೊಳ್ಳುವಂತದ್ದು ಏನು ಇಲ್ಲ. ನನ್ನ ತಮ್ಮನ ರಾಜಕೀಯದ ಬಗ್ಗೆ ಸಂಸದರು ಪ್ರಮಾಣ ಪತ್ರ ನೀಡಿರುವುದು ನನಗೆ ಸಂತೋಷ ತಂದಿದೆ ಎಂದು ಅವರು ತಿಳಿಸಿದರು.

ಸುಮ್ಮನೆ ಆರೋಪ ಮಾಡೋದು, ಮಾಧ್ಯಮಗಳ ಗಮನ ತಮ್ಮತ್ತ ಸೆಳೆಯುವುದು ಸರಿಯಲ್ಲ. ಸಂಸದರಾಗಿ ಮಂಡ್ಯ ಜನ ನಿಮಗೆ ಅವಕಾಶ ನೀಡಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಿ. ರಾಜ್ಯದ ಜನ ಎಲ್ಲವನ್ನು ಗಮನಿಸುತ್ತಿದ್ದಾರೆ, ಈ ಮಾರ್ಗ ಸರಿಯಲ್ಲ ಎಂದರು.

ರಾಜ್ಯದಲ್ಲಿ ಇನ್ನೂ 22 ತಿಂಗಳಲ್ಲಿ ಚುನಾವಣೆ ಎದುರಾಗುತ್ತೆ. ಯುವ ಜೆಡಿಎಸ್ ಅಧ್ಯಕ್ಷನಾಗಿ ಈಗಾಗಲೇ ಎಲ್ಲಾ ಕಡೆ ಓಡಾಡುತ್ತಿದ್ದೇನೆ. ಒಬ್ಬ ಯುವಕನಾಗಿ ಚುನಾವಣೆಯಲ್ಲಿ ಯುವಕರಿಗೆ ಆದ್ಯತೆ ನೀಡುವುದು ನನ್ನ ಜವಬ್ದಾರಿ ಎಂದು ಅವರು ತಿಳಿಸಿದರು.

Facebook Comments