ಬಿಜೆಪಿ,ಕಾಂಗ್ರೆಸ್ ವೈಫಲ್ಯಗಳೇ ನಮ್ಮ ಚುನಾವಣೆ ಅಸ್ತ್ರ : ಹೆಚ್ಡಿಕೆ
ಬೆಂಗಳೂರು, ಅ.14- ನಮ್ಮ ಪಕ್ಷ ಅಕಾರದಲ್ಲಿದ್ದಾಗ ಮಾಡಿರುವ ಸಾಧನೆಗಳು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ವೈಫಲ್ಯಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ವಿ.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದೇವೆ ಎಂದರು.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಜನರು ಮಳೆಯಿಂದ ಮನೆ-ಮಠ ಕಳೆದುಕೊಂಡಿದ್ದಾರೆ. ಅಲ್ಲದೆ ಕೊರೊನಾ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಕೊರೊನಾ ಎದುರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಡಿಜೆ ಹಳ್ಳಿ ಘಟನೆಯನ್ನು ನೋಡಿದ್ದೇವೆ. ಶಾಸಕರ ಮನೆಗೆ ಬೆಂಕಿ ಇಡಲಾಗಿತ್ತು. ಕಾಂಗ್ರೆಸ್ನ ಬಣ್ಣ ಈಗಾಗಲೇ ಬಯಲಾಗಿದೆ. ಕಳೆದ 2013ರ ಚುನಾವಣೆ ಫಲಿತಾಂಶ ಪ್ರಕಟವಾದಾಗ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಅವರ ತಂದೆ ನಾನು ಮುಖ್ಯಮಂತ್ರಿಯಾಗುತ್ತೇನೆಂದು ಸಾಕಷ್ಟು ಆಸೆ ಇಟ್ಟುಕೊಂಡಿದ್ದರು. ಅದೇ ನೋವಿನಿಂದ ಅಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜ್ಞಾನಭಾರತಿ ವಾರ್ಡ್ನಲ್ಲಿ ತಂದೆಯವರ ನೆನಪಿಗಾಗಿ ಪ್ರತಿ ವರ್ಷ ಬಡವರಿಗೆ ಸಹಾಯ ಮಾಡಿಕೊಂಡು ಕೃಷ್ಣಮೂರ್ತಿ ಬಂದಿದ್ದಾರೆ. ಅವರ ಗೆಲುವಿಗಾಗಿ ನಾವು ಶ್ರಮಿಸುತ್ತೇವೆ ಎಂದು ಹೇಳಿದರು.