ಮಧುಬಂಗಾರಪ್ಪ ಮನವೊಲಿಕೆಗೆ ಮುಂದಾದ ಜೆಡಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.20-ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ನಂತರ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಮಾಜಿ ಶಾಸಕ ಮಧುಬಂಗಾರಪ್ಪ ಅವರ ಮನವೊಲಿಕೆಗೆ ಜೆಡಿಎಸ್ ಮುಂದಾಗಿದೆ.  ಪಕ್ಷದ ಯಾವುದೇ ಕಾರ್ಯಕ್ರಮ, ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳದೆ ಅಂತರ ಕಾಯ್ದುಕೊಳ್ಳುತ್ತಿರುವ ಮಧುಬಂಗಾರಪ್ಪ ಅವರ ಮನವೊಲಿಸುವ ಜವಾಬ್ದಾರಿಯನ್ನು ಮಾಜಿ ಸಚಿವ ಬಸವರಾಜ್ ಹೊರಟ್ಟಿ ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅವರಿಗೆ ವಹಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮಧುಬಂಗಾರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಸಂಘಟನೆ ಬಲಗೊಳಿಸಲು ಜೆಡಿಎಸ್ ವರಿಷ್ಠರು ಉದ್ದೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೊರಟ್ಟಿ ಮತ್ತು ಕೋನರೆಡ್ಡಿ ಅವರಿಗೆ ಮನವೊಲಿಸುವ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಮಧುಬಂಗಾರಪ್ಪ ಅವರು, ತಾವು ಜೆಡಿಎಸ್ ತೊರೆದಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು. ಆನಂತರವೂ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿರಲಿಲ್ಲ. ಸಂಕ್ರಾಂತಿಯ ನಂತರ ಪಕ್ಷದ ಎಲ್ಲ ಸಮಿತಿಗಳನ್ನು ವಿಸರ್ಜನೆ ಮಾಡಿದ್ದು, ಪಕ್ಷಕ್ಕೆ ಚೈತನ್ಯ ತುಂಬಲು ಕುಮಾರಸ್ವಾಮಿ ಮುಂದಾಗಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ಮಧುಬಂಗಾರಪ್ಪ ಅವರ ಮನೆಗೆ ತೆರಳಿ ಜೆಡಿಎಸ್‍ನಲ್ಲೇ ಉಳಿಯುವಂತೆ ಮನವಿ ಮಾಡಲು ಕುಮಾರಸ್ವಾಮಿ ಅವರು ಈ ಜವಾಬ್ದಾರಿಯನ್ನು ನೀಡಿದ್ದಾರೆ.

Facebook Comments

Sri Raghav

Admin