ತೈಲ ಬೆಲೆ ಏರಿಕೆ ಖಂಡಿಸಿ ಜಿಲ್ಲಾ-ತಾಲ್ಲೂಕು ಮಟ್ಟದಲ್ಲಿ ಜೆಡಿಎಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22-ನಿರಂತರವಾಗಿ ಏರುತ್ತಿರುವ ತೈಲ ಬೆಲೆಯನ್ನು ಇಳಿಕೆ ಮಾಡಬೇಕೆಂದು ಆಗ್ರಹಿಸಿ ಜೆಡಿಎಸ್ ಸದ್ಯದಲ್ಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದೆ. ಡೀಸೆಲ್, ಪೆಟ್ರೋಲ್ ಬೆಲೆ ನಿರಂತರವಾಗಿ ಏರುತ್ತಿರು ವುದನ್ನು ತಡೆಯಬೇಕು. ಅದೇ ರೀತಿ ಅಡುಗೆ ಅನಿಲ ಬೆಲೆ ಏರಿಕೆಯನ್ನು ಇಳಿಸಬೇಕು ಎಂದು ಆಗ್ರಹಿಸಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಈ ಸಂಜೆಗೆ ತಿಳಿಸಿದರು.

ಸರ್ಕಾರದ ಗಮನ ಸೆಳೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ನಮ್ಮ ಪಕ್ಷದ ವತಿಯಿಂದ ಸದ್ಯದಲ್ಲೇ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೆ ಪ್ರತಿಭಟನೆ ನಡೆಸುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಇಳಿಸುವ ಮೂಲಕ ಜನರ ರಕ್ಷಣೆಗೆ ಮುಂದಾಗಬೇಕು.

ಬೆಲೆ ಏರಿಕೆ ನಿಯಂತ್ರಿಸದಿರುವುದು ಅತ್ಯಂತ ಖಂಡನೀಯ ಎಂದ ಅವರು, ಆತ್ಮ ನಿರ್ಭರ್ ಯೋಜನೆ ಸೇರಿದಂತೆ ಕೆಲವು ಯೋಜನೆಗಳಲ್ಲಿ ಸಣ್ಣ ಪ್ರಮಾಣದ ಸಹಾಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

ಆದರೆ ತೈಲ ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಲ್ಲದೆ ಕೋವಿಡ್ ಸಂಕಷ್ಟದಿಂದ ಜನರು ಹೊರಬರುವ ಮುನ್ನವೇ ಅಗತ್ಯ ವಸ್ತುಗಳು ಹೆಚ್ಚಳವಾಗಿದೆ. ಇದು ಜನಸಾಮಾನ್ಯರಿಗೆ ಭಾರೀ ಹೊರೆಯಾಗಿದ್ದು, ಕೂಡಲೇ ಎರಡೂ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರ ರಕ್ಷಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

Facebook Comments