ರಾಜಕೀಯ ಹೈಡ್ರಾಮಾದಲ್ಲಿ ಟ್ವಿಸ್ಟ್, ಕಾಂಗ್ರೆಸ್‌ಗೆ ಸಿಎಂ ಹುದ್ದೆ ಬಿಟ್ಟುಕೊಡಲು ಮುಂದಾದ ಜೆಡಿಎಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.21- ಸಮ್ಮಿಶ್ರ ಸರ್ಕಾರದ ರಾಜಕೀಯ ಬಿಕ್ಕಟ್ಟು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಜೆಡಿಎಸ್ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ ಹೇಳಿದ ಬೆನ್ನಲ್ಲೇ ರಾಜಕೀಯ ಚರ್ಚೆಗಳು ಕಾಂಗ್ರೆಸ್‍ನಲ್ಲಿ ತೀವ್ರಗೊಂಡಿವೆ. ಜೆಡಿಎಸ್ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವುದಾಗಿ ಭರವಸೆ ನೀಡಿರುವುದನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಖಚಿತ ಪಡಿಸಿದ್ದಾರೆ.

ನಾವು ಯಾವ ತ್ಯಾಗಕ್ಕಾದರೂ ಸಿದ್ದ. ಸದ್ಯಕ್ಕೆ ಸರ್ಕಾರ ಉಳಿಯಬೇಕು. ನಮ್ಮ ಮೈತ್ರಿ ಮುಂದುವರೆಯಬೇಕು ಎಂಬ ಮಾತನ್ನು ಜೆಡಿಎಸ್ ನಾಯಕರು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ನನಗೆ ಈಗಲೂ ವಿಶ್ವಾಸವಿದೆ. ಮುಂಬೈಗೆ ಹೋಗಿರುವ ಶಾಸಕರ ಮನವೊಲಿಸಲು ನಾವು ಯಶಸ್ವಿಯಾಗುತ್ತೇವೆ. ಅವರು ಕೂಡ ಮನಸ್ಸು ಬದಲಿಸಿ ವಾಪಸ್ ಬರುತ್ತಾರೆ. ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತಯಾಚನೆಯಲ್ಲಿ ಗೆಲ್ಲುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಜೆಡಿಎಸ್ ಪಾಳಯದಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಆಫರ್ ಬಂದಿರುವುದು ನಿಜ. ಸಿದ್ದರಾಮಯ್ಯ ಸೇರಿದಂತೆ ಯಾರೇ ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ ಎಂದು ಜೆಡಿಎಸ್ ನಾಯಕರು ಸ್ಪಷ್ಟಪಡಿಸಿದ್ದಾರೆ.

ನನಗೆ ಹಾಗೂ ಪರಮೇಶ್ವರ್ ಅವರಿಗೆ ಆಫರ್ ಬಂದಿದೆ. ಸದ್ಯಕ್ಕೆ ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. ನಾಳಿನ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಜೆಡಿಎಸ್‍ನಿಂದ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಆಫರ್ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಚುರುಕಾಗಿದ್ದಾರೆ. ಸಂಜೆ ತಾಜ್‍ವಿವಂತ ಹೋಟೆಲ್‍ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಆಯೋಜಿಸಲಾಗಿದೆ.

ಶುಕ್ರವಾರ ಅಧಿವೇಶನ ಮುಗಿದ ನಂತರ ಕೆಲವು ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ತೆರಳಿದ್ದು, ಅವರು ಮರಳಿ ವಾಪಸ್ ಬರುವಂತೆ ತಾಕೀತು ಮಾಡಲಾಗಿದೆ. ಜೆಡಿಎಸ್‍ನ ಆಫರ್ ಹಿನ್ನೆಲೆಯಲ್ಲಿ ಅತೃಪ್ತರನ್ನು ಕರೆತರುವ ಪ್ರಯತ್ನಗಳೂ ನಡೆಯುತ್ತಿವೆ.

ಇಂದು ಬೆಳಗ್ಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ತೆರಳಿ ಚರ್ಚೆ ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರಾದ ಜಮೀರ್ ಅಹಮ್ಮದ್‍ಖಾನ್, ನಜೀರ್ ಅಹಮ್ಮದ್ ಅವರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಿ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಒಟ್ಟಿನಲ್ಲಿ ಜೆಡಿಎಸ್ ಅಸಹಾಯಕ ಸ್ಥಿತಿಗೆ ತಲುಪಿದ್ದು, ಇತ್ತ ಕಾಂಗ್ರೆಸ್‍ನಲ್ಲಿ ಹೊಸ ಭರವಸೆಗಳು ಹುಟ್ಟಿವೆ. ಜತೆ ಜತೆಯಲ್ಲಿ ಮುಖ್ಯಮಂತ್ರಿಯಾಗುವುದಾದರೆ ಯಾರು ಎಂಬ ನಿಟ್ಟಿನಲ್ಲೂ ಪೈಪೋಟಿ ಗಳು ಆರಂಭವಾಗಿದೆ.

Facebook Comments

Sri Raghav

Admin