ಉಪಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಜೆಡಿಎಸ್‍ನಿಂದ ಸರಣಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15-ವಿಧಾನಸಭೆ ಉಪಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಚೈತನ್ಯ ತುಂಬಲು ಜೆಡಿಎಸ್ ವರಿಷ್ಠರು ಮುಂದಾಗಿದ್ದು, ಸರಣಿ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದಾರೆ.

ಅರಮನೆ ಮೈದಾನದಲ್ಲಿ ಜನವರಿ 23ರಂದು ನಡೆಯಲಿರುವ ಪಕ್ಷದ ಸಮಾವೇಶದ ನಂತರ ಸರಣಿ ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸರಣಿ ಸಭೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.

ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ, ವಿವಿಧ ಘಟಕಗಳ ಸಭೆ, ಜಿಲ್ಲಾವಾರು ಹಾಗೂ ಸಮುದಾಯವಾರು ಸಭೆಗಳನ್ನು ನಡೆಸಿ ಪಕ್ಷದ ಹಿನ್ನಡೆಗೆ ಕಾರಣಗಳನ್ನು ಕಂಡುಹಿಡಿಯಲಾಗುತ್ತದೆ. ಅಲ್ಲದೆ, ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಅಭಿಪ್ರಾಯ ಪಡೆಯಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಹೀನಾಯ ಸೋಲುಂಟಾಗಿದೆ. ಇದರಿಂದ ಮುಖಂಡರು, ಕಾರ್ಯಕರ್ತರು ಕಂಗಾಲಾಗಬೇಕಿಲ್ಲ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ. ವಿಧಾನಸಭೆಗೆ ಚುನಾವಣೆ ನಡೆಯಲು ಮೂರೂವರೆ ವರ್ಷಗಳ ಕಾಲಾವಕಾಶ ಇರುವುದರಿಂದ ಅಷ್ಟರಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬಹುದಾಗಿದೆ ಎಂಬ ಸಲಹೆಯನ್ನು ವರಿಷ್ಠರು ನೀಡುತ್ತ ಬಂದಿದ್ದಾರೆ.

ಜನವರಿ ಕೊನೆಯ ವಾರ ಇಲ್ಲವೆ ಫೆಬ್ರವರಿ ಮೊದಲ ವಾರದಲ್ಲಿ ಸರಣಿ ಸಭೆಗಳನ್ನು ಜೆಡಿಎಸ್ ನಾಯಕರು ನಡೆಸಿ ಪಕ್ಷ ಸಂಘಟನೆಗೆ ಒತ್ತು ನೀಡುವುದಲ್ಲದೆ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪರ ಹೋರಾಟ ಹಮ್ಮಿಕೊಳ್ಳುವ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments

Sri Raghav

Admin