ಜನತಾ ಜಲಧಾರೆ ಕಾರ್ಯಕ್ರಮದ ಬಗ್ಗೆ ನಾಳೆ ಜೆಡಿಎಸ್ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.6- ರಾಜ್ಯದಲ್ಲಿರುವ ಜೀವನದಿಗಳಿಂದ ಜಲ ಸಂಗ್ರಹಿಸಲು ಹಮ್ಮಿಕೊಳ್ಳುವ ಜನತಾ ಜಲಧಾರೆ ಕಾರ್ಯಕ್ರಮ ಮತ್ತು ಪಕ್ಷದ ಸಾಂಸ್ಥಿಕ ಚುನಾವಣೆ ಬಗ್ಗೆ ಸಮಾಲೋಚನೆ ನಡೆಸಲು ನಾಳೆ ಜೆಡಿಎಸ್ ಸಭೆ ನಡೆಯಲಿದೆ.

ನಾಳೆ ಮಧ್ಯಾಹ್ನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಂಕ್ರಾಂತಿ ನಂತರ ರಾಜ್ಯದ ಪ್ರಮುಖ ಜೀವನದಿಗಳಿಂದ ಜಲ ಸಂಗ್ರಹಿಸುವ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ, ಪಕ್ಷದ ಸಾಂಸ್ಥಿಕ ಚುನಾವಣೆ ನಡೆಸುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುತ್ತದೆ.

ಸಂಸದರು, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರುಗಳಿಗೆ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಈ ಎರಡೂ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಸಲಹೆ ನೀಡುವಂತೆ ಕೋರಲಾಗಿದೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ. ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳ ಸಿದ್ಧತೆ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ. 2023ಕ್ಕೆ ಸ್ವಂತ ಶಕ್ತಿ ಮೇಲೆ ಅಕಾರಕ್ಕೆ ಬರಲು ಈಗಿನಿಂದಲೇ ಕಾರ್ಯೋನ್ಮುಖರಾಗಲು ರೂಪಿಸಬೇಕಾದ ಕಾರ್ಯಕ್ರಮಗಳ ಬಗ್ಗೆಯೂ ಸಮಗ್ರ ಚರ್ಚೆ ನಡೆಸಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಜರಿದ್ದು, ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ. ಹೀಗಾಗಿ ಶಾಸಕರು, ಜಿಲ್ಲಾಧ್ಯಕ್ಷರು ಹಾಗೂ ಸಂಸದರು ತಪ್ಪದೆ ಹಾಜರಾಗುವಂತೆ ಆಹ್ವಾನ ನೀಡಲಾಗಿದೆ.

Facebook Comments