ಬಿಜೆಪಿ ಬಯಸಿದರೆ ಬೆಂಬಲ ನೀಡಲು ರೆಡಿಯಾದ ಜೆಡಿಎಸ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.27- ಬಿಜೆಪಿ ಸುಭದ್ರ ಆಡಳಿತ ನಡೆಸಲು ಹಾಗೂ ಸರ್ಕಾರವನ್ನು ಉಳಿಸಿಕೊಳ್ಳಲು ತಮ್ಮ ಬೆಂಬಲವನ್ನು ಬಯಸಿದ್ದೇ ಆದರೆ ನೀಡುವ ಬಗ್ಗೆ ಜೆಡಿಎಸ್ ಗಂಭೀರ ಚಿಂತನೆಯನ್ನು ನಡೆಸಿದೆ.

ಬಿಜೆಪಿಗೆ ನಾವೇ ಮುಂದೆ ಹೋಗಿ ಬೆಂಬಲ ನೀಡುತ್ತೇವೆ ಎಂದು ಹೇಳುವುದು ಬೇಡ. ಅವರಾಗಿಯೇ ನಮ್ಮ ಬೆಂಬಲವನ್ನು ಬಯಸುವುದಾದರೆ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜೆಡಿಎಸ್ ಶಾಸಕರು ವ್ಯಕ್ತಪಡಿಸಿದ್ದಾರೆ.

ಆದರೂ ಜೆಡಿಎಸ್ ವರಿಷ್ಠರು ಈ ವಿಚಾರದಲ್ಲಿ ಈ ತನಕ ಯಾವುದೇ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ. ಕಾಂಗ್ರೆಸ್-ಜೆಡಿಎಸ್‍ನ ಶಾಸಕರು ರಾಜೀನಾಮೆ ನೀಡಿರುವುದರಿಂದ ಉಂಟಾಗಿರುವ ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ. ಪರಿಸ್ಥಿತಿಯನ್ನು ಅವಲೋಕಿಸಿ ಸಂದರ್ಭಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ಅಭಿಪ್ರಾಯವನ್ನು ಜೆಡಿಎಸ್ ಶಾಸಕರು ವ್ಯಕ್ತಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಶಾಸಕರ ಸಭೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಪ್ರಸ್ತಾಪವಾಗಿದೆ. ಕೆಲವರು ಬೆಂಬಲ ನೀಡುವುದು ಬೇಡ. ರಚನಾತ್ಮಕವಾಗಿ ವಿರೋಧ ಪಕ್ಷದಲ್ಲಿ ಕೆಲಸ ಮಾಡೋಣ ಎಂಬ ಸಲಹೆಯನ್ನು ವ್ಯಕ್ತಪಡಿಸಿದ್ದಾರೆ.

ಯಾವುದೇ ಪಕ್ಷದ ಶಾಸಕರಿಗೆ ಮಧ್ಯಂತರ ಚುನಾವಣೆಗೆ ಹೋಗುವುದು ಇಷ್ಟವಿಲ್ಲ. ಹೀಗಾಗಿ ಯಾವುದಾದರೊಂದು ಸುಭದ್ರ ಸರ್ಕಾರವಿರಬೇಕು. ರಾಜಕೀಯ ಅಸ್ಥಿರತೆ ಕೊನೆಗೊಳ್ಳಬೇಕು ಎಂಬ ನಿಲುವನ್ನು ಶಾಸಕರು ಹೊಂದಿದ್ದಾರೆ.

ಅದೇ ರೀತಿ ಜೆಡಿಎಸ್ ಶಾಸಕರು ಕೂಡ ರಾಜಕೀಯ ಅಸ್ಥಿರತೆ ಕೊನೆಗೊಳ್ಳಬೇಕೆಂದು ಬಯಸಿದ್ದು , ಸುಭದ್ರ ಸರ್ಕಾರಕ್ಕೆ ಬೆಂಬಲ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಬಿಜೆಪಿ ಸರ್ಕಾರ ಉಳಿಸಿಕೊಳ್ಳುವ ಹಾಗೂ ಸುಭದ್ರ ಆಡಳಿತ ನೀಡುವ ದೃಷ್ಟಿಯಿಂದ ತಾನಾಗಿಯೇ ಬಂದು ಬೆಂಬಲ ನೀಡುವಂತೆ ಬಯಸಿದರೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸಬೇಕೆಂಬ ಒತ್ತಾಯವನ್ನು ಬಹಳಷ್ಟು ಶಾಸಕರು ಕುಮಾರಸ್ವಾಮಿಯವರಿಗೆ ಮಾಡಿದ್ದಾರೆ.

ಈ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಕುಮಾರಸ್ವಾಮಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ. ದೇವೇಗೌಡರಿಗೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ವಿಧಾನಸಭೆ ವಿಸರ್ಜನೆಯಾಗಬಾರದು. ಯಾವುದಾದರೊಂದು ಸುಭದ್ರ ಸರ್ಕಾರ ಆಡಳಿತ ನಡೆಸಬೇಕು.

ಈಗಿನ ರಾಜಕೀಯ ಅಸ್ಥಿರತೆ ದೂರವಾಗಬೇಕು. ಇಲ್ಲದಿದ್ದರೆ ಯಾವುದೇ ಅಭಿವೃದ್ಧಿಯಾಗುವುದಿಲ್ಲ. ಜನರ ಅವಕೃಪೆಗೂ ಒಳಗಾಗಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಬಹಳಷ್ಟು ಶಾಸಕರು ವ್ಯಕ್ತಪಡಿಸಿದ್ದಾರೆ.

ಶಾಸಕರ ಅಭಿಪ್ರಾಯವನ್ನು ಆಲಿಸಿದ ಕುಮಾರಸ್ವಾಮಿಯವರು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಲಾಗಿದೆ. ಜತೆಗೆ ಚುನಾವಣೆಗಳನ್ನು ಎದುರಿಸಿದ್ದೇವೆ. ಈಗ ಮೈತ್ರಿ ಸರ್ಕಾರ ಕಳೆದುಕೊಂಡಿದ್ದೇವೆ.

ಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಕಾಂಗ್ರೆಸ್ ಯಾವ ತೀರ್ಮಾನವನ್ನು ಕೈಗೊಳ್ಳುತ್ತದೋ ಕಾದು ನೋಡೋಣ. ಆನಂತರ ಮುಂದಿನ ಹೆಜ್ಜೆ ಇಡುವ ಬಗ್ಗೆ ತೀರ್ಮಾನಿಸೋಣ. ಸದ್ಯಕ್ಕೆ ಪಕ್ಷದ ಸಂಘಟನೆಯ ಕಡೆ ಗಮನ ಹರಿಸೋಣ ಎಂಬ ಕಿವಿಮಾತನ್ನು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಜಿ.ಟಿ.ದೇವೇಗೌಡ ಜೆಡಿಎಸ್ ಶಾಸಕರೆಲ್ಲರೂ ಒಟ್ಟಾಗಿದ್ದು , ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದೇವೆ. ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕೋ ಅಥವಾ ಬಿಜೆಪಿಗೆ ಬೆಂಬಲ ಕೊಡಬೇಕೆ ಎಂಬುದನ್ನು ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಕೆಲವರು ವಿರೋಧ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಜಿಟಿಡಿ ಹೇಳಿದರು.

Facebook Comments

Sri Raghav

Admin