ಜೆಡಿಎಸ್ ಟ್ರ್ಯಾಪ್​ನಲ್ಲಿ ಕಾಂಗ್ರೆಸ್, ಎಚ್ಚರಿಕೆಯ ಹೆಜ್ಜೆಯತ್ತ ಕಾಂಗ್ರೆಸ್ ನಾಯಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ಮೈತ್ರಿ ವಿಷಯದಲ್ಲಿ ಜೆಡಿಎಸ್ ನಾಯಕರು ನೀಡುತ್ತಿರುವ ಹೇಳಿಕೆಯನ್ನು ನಂಬಿ ರಾಜಕೀಯವಾಗಿ ತಪ್ಪು ಹೆಜ್ಜೆ ಇಡದಿರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ. ನಿನ್ನೆ ರಾತ್ರಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಮನೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಇತ್ತೀಚಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಗಂಭೀರ ಸಮಾಲೋಚನೆ ನಡೆದಿದೆ. ಉಪ ಚುನಾವಣಾ ರಾಜಕೀಯ ಕಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತೆ ಕಾಂಗ್ರೆಸ್ ಜತೆಗಿನ ಮೈತ್ರಿಯ ವಿಷಯವನ್ನು ಪ್ರಸ್ತಾಪ ಮಾಡಿ ಕಾಂಗ್ರೆಸ್ ಮತಗಳನ್ನು ವಿಭಜಿಸುವ ಪ್ರಯತ್ನ ಮಾಡಿದ್ದಾರೆ.

ಈ ಹಿಂದೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಾಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರ ಜೆಡಿಎಸ್ ಜತೆಗಿನ ಮೈತ್ರಿಯಿಂದ ಕಾಂಗ್ರೆಸ್‍ಗೆ ಯಾವ ಲಾಭವೂ ಆಗುವುದಿಲ್ಲ. ಬದಲಾಗಿ ಜೆಡಿಎಸ್‍ಗೆ ಅನುಕೂಲವಾಗುತ್ತದೆ. ಸಮ್ಮಿಶ್ರ ಸರ್ಕಾರ ರಚನೆ, ಸರ್ಕಾರ ಪತನದ ಸಂದರ್ಭದ ಬೆಳವಣಿಗೆಗಳು ಕಣ್ಣೆದುರಿಗೆ ಇವೆ . 2004ರಲ್ಲೂ ಜೆಡಿಎಸ್‍ನೊಂದಿಗಿನ ಮೈತ್ರಿ ಸಾಕಷ್ಟು ಪಾಠ ಕಲಿಸಿವೆ.

ಇಂತಹ ಸಂದರ್ಭದಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಉದ್ದೇಶ ಪೂರ್ವಕವಾಗಿಯೇ ಮೈತ್ರಿ ವಿಷಯ ಪ್ರಸ್ತಾಪಿಸಿದ್ದಾರೆ. ಅದಕ್ಕೂ ಮೊದಲು ಯಡಿಯೂರಪ್ಪ ನವರ ಸರ್ಕಾರ ಪತನವಾಗಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿಯವರೇ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ರಚನೆಯಾಗುತ್ತಿದ್ದಂತೆ ಹೇಳಿಕೆಗಳಲ್ಲಿ ಬದಲಾವಣೆ ಮಾಡಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಮೈತ್ರಿ ಪ್ರಸ್ತಾಪವನ್ನು ನಂಬಿ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಲು ಆರಂಭಿಸುತ್ತಿದ್ದಂತೆ ದೇವೇಗೌಡರು ಏಕಾಏಕಿ ಉಲ್ಟಾ ಹೊಡೆದಿದ್ದಾರೆ.

ಯಡಿಯೂರಪ್ಪ ಅವರ ಸರ್ಕಾರ ಏಕೆ ಹೋಗಬೇಕು. ಅವರಿಗೆ ಸಂಖ್ಯಾಬಲ ಇದೆಯಲ್ಲಾ? ಕಾಂಗ್ರೆಸ್ ಮೈತ್ರಿ ವೇಳೆ ಕುಮಾರಸ್ವಾಮಿ ಅನುಭವಿಸಿದ ಹಿಂಸೆ ನನಗೆ ನೆನಪಿದೆ ಎಂದು 24 ಗಂಟೆ ಒಳಗಾಗಿಯೇ ದೇವೇಗೌಡರು ಹೇಳಿಕೆಯನ್ನು ಬದಲಾವಣೆ ಮಾಡಿದ್ದಾರೆ. ಜೆಡಿಎಸ್ ನಾಯಕರ ಮಾತುಗಳನ್ನು ನಂಬಿ ಕಾಂಗ್ರೆಸ್ ನಾಯಕರು ಅಧಿಕರದ ಕನಸು ಕಂಡರೆ ಅದು ಭಗ್ನಗೊಳ್ಳುವುದು ಶತಸಿದ್ಧ. ಸ್ವಲ್ಪ ದಿನ ತಾಳ್ಮೆಯಿಂದ ವಿರೋಧ ಪಕ್ಷದ ಸ್ಥಾನದಲ್ಲೇ ಕುಳಿತುಕೊಂಡರೆ ಸಾಕು. ಬಿಜೆಪಿಯ ಆಂತರಿಕ ಬೆಳವಣಿಗೆಯಿಂದ ಸರ್ಕಾರ ಪತನಗೊಳ್ಳುತ್ತದೆ. ಆ ನಂತರ ಚುನಾವಣೆ ಎದುರಿಸಿದರೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇರುತ್ತದೆ.

ಅದನ್ನು ಬಿಟ್ಟು ಮೈತ್ರಿ ಸರ್ಕಾರ ಪುನಾರಚನೆಗೆ ಆತುರ ಪಟ್ಟರೆ ಪಕ್ಷ ಸಂಘಟನೆ ಹಾಗೂ ವರ್ಚಸ್ಸಿಗೆ ಹೊಡೆತ ಬೀಳುತ್ತದೆ ಎಂದು ಕೆಲವು ನಾಯಕರು ವಾದ, ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಜೆಡಿಎಸ್ ಜತೆ ಮೈತ್ರಿ ಸರ್ಕಾರ ರಚಿಸುವ ಚರ್ಚೆ ನಡೆಯುತ್ತಿರುವುದಾಗಿ ವದಂತಿಗಳು ಹಬ್ಬುತ್ತಿವೆ. ಇದರಿಂದ ಅಹಿಂದ ವರ್ಗಕ್ಕೆ ಕಾಂಗ್ರೆಸ್ ಮೇಲಿನ ವಿಶ್ವಾಸ ಹೋಗುತ್ತದೆ. ಉಪ ಚುನಾವಣೆಯಲ್ಲಿ ಧಕ್ಕೆಯಾಗುತ್ತದೆ.

ಬಿಜೆಪಿ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದಿದ್ದೇ ಆದರೆ ಮೈತ್ರಿ ಸರ್ಕಾರ ಪುನಾರಚನೆಯಾಗುವ ಪ್ರಸ್ತಾಪವೇ ಬರುವುದಿಲ್ಲ. ಕೂಸುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಅಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕರನ್ನು ಎಳೆದು ತರಲಾಗುತ್ತಿದೆ. ರಾಜಕೀಯದಲ್ಲಿ ಇಂತಹ ಸಂಚುಗಳು ಹಾಗಾಗ್ಗೆ ನಡೆಯುತ್ತಿರುತ್ತವೆ. ಅದಕ್ಕೆ ಬಲಿಯಾಗದಂತೆ ಹಿರಿಯ ನಾಯಕರು ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾಗಿ ಮೈತ್ರಿ ಕುರಿತಂತೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಗಿದೆ.

Facebook Comments