2019ರಲ್ಲಿ ಜೆಡಿಎಸ್‍ಗೆ ಸಿಹಿ ಘಟನೆಗಳಿಗಿಂತ ಕಹಿ ಘಟನೆಗಳೇ ಹೆಚ್ಚು..

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.25-ಪ್ರಸಕ್ತ ವರ್ಷದಲ್ಲಿ ಜೆಡಿಎಸ್ ಗಳಿಸಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. 2019ರ ವರ್ಷದ ಹಿನ್ನೋಟದ ಬಗ್ಗೆ ಅವಲೋಕಿಸಿದಾಗ ಜೆಡಿಎಸ್‍ಗಾಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿ ಕಂಡು ಬರುತ್ತದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸುವ ಮೂಲಕ ಆ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿತ್ತು.

ಆದರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲುವ ಮೂಲಕ ಜೆಡಿಎಸ್ ಒಂದು ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಸನ ಕ್ಷೇತ್ರದ ಬದಲಾಗಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ಹೀಗೆ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಭಾರೀ ಹಿನ್ನಡೆಯಾಯಿತು.

ಲೋಕಸಭೆ ಚುನಾವಣೆ ಸೋಲಿನ ನಂತರ ದೇವೇಗೌಡರು ಪಕ್ಷ ಸಂಘಟನೆಗೆ ಹೆಚ್ಚು ಒತ್ತುಕೊಟ್ಟು ಪದಾಧಿಕಾರಿಗಳ ವಿವಿಧ ಘಟಕಗಳ ಹಾಗೂ ಜಿಲ್ಲಾವಾರು ಮುಖಂಡರ ಪಕ್ಷದ ಸಭೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಜೆಡಿಎಸ್‍ಗೆ ಚೈತನ್ಯ ತುಂಬುವ ಕಾರ್ಯವನ್ನು ಮಾಡಿದರು. ನಂತರ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನೇ ತೊರೆದರು. ವಿಶ್ವನಾಥ್ ಅವರಲ್ಲದೆ, ಜೆಡಿಎಸ್ ಶಾಸಕರಾಗಿದ್ದ ಗೋಪಾಲಯ್ಯ ಹಾಗೂ ನಾರಾಯಣಗೌಡ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷವನ್ನು ಬಿಟ್ಟರು.

ಇದರಿಂದ ವಿಧಾನಸಭೆಯಲ್ಲಿ ಜೆಡಿಎಸ್ ಮೂರು ಶಾಸಕರ ಸ್ಥಾನ ಕಡಿಮೆಯಾದಂತಾಯಿತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಕ್ಕೂ ಇದು ಕಾರಣವಾಯಿತು.
ಕಳೆದ 2018ರಲ್ಲಿ ಜೆಡಿಎಸ್‍ಗೆ ಅಧಿಕಾರದ ಅದೃಷ್ಟ ಒಲಿದುಬಂದಿತ್ತು. ಆದರೆ ಕೆಲ ಕಾಂಗ್ರೆಸ್-ಜೆಡಿಎಸ್ ಶಾಸಕರ ಬಂಡಾಯದಿಂದಾಗಿ ಜೆಡಿಎಸ್ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಸರ್ಕಾರ ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಫಲ ನೀಡಲಿಲ್ಲ.

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಳ್ಳುವ ಮೂಲಕ ಜೆಡಿಎಸ್ ಅಧಿಕಾರ ಕಳೆದುಕೊಳ್ಳುವಂತಾಯಿತು. ಆಡಳಿತ ಪಕ್ಷದಲ್ಲಿದ್ದ ಜೆಡಿಎಸ್ ವಿರೋಧ ಪಕ್ಷ ಸ್ಥಾನಕ್ಕೆ ಬರುವಂತಾಯಿತು.  ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಅವರು ನೇಮಕಗೊಂಡರು. ನಂತರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷಕ್ಕೆ ನಿರಾಸೆಯಾಗದಿದ್ದರೂ ಉತ್ತಮ ಫಲಿತಾಂಶವೇನು ಬರಲಿಲ್ಲ.

ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಕೇವಲ ಒಂದು ಕ್ಷೇತ್ರದಲ್ಲೂ ಜೆಡಿಎಸ್ ಗೆಲುವು ಸಾಧಿಸಲಾಗದೆ ಸೋಲು ಅನುಭವಿಸುವಂತಾಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಮಾಡಿದ್ದ ರೈತರ ಸಾಲಮನ್ನಾ,ಬಡವರ ಬಂಧು ಯೋಜನೆಯಂತಹ ಜನಪರ ಕಾರ್ಯಕ್ರಮಗಳು ಕೂಡ ಉಪಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನೆರವಿಗೆ ಬರಲ್ಲಿಲ. ಹೀಗಾಗಿ ಜೆಡಿಎಸ್ ಪಾಳೆಯದಲ್ಲಿ ನಿರಾಸೆಯ ಕಾರ್ಮೋಡ ಆವರಿಸಿದೆ.

ಜೆಡಿಎಸ್ ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆ ಹಾಗೂ ಹುಣಸೂರು ಕ್ಷೇತ್ರಗಳನ್ನು ಕಳೆದುಕೊಳ್ಳುವಂತಾಯಿತು. ಹೀಗೆ 2019ರ ವರ್ಷದಲ್ಲಿ ಜೆಡಿಎಸ್‍ಗೆ ಸಿಹಿ ಘಟನೆಗಳಿಗಿಂತ ಕಹಿ ಘಟನೆಗಳೇ ಹೆಚ್ಚಾಗಿ ಘಟಿಸಿವೆ.

Facebook Comments