ಮುಂಬೈನಿಂದ ಬೆಂಗಳೂರಿಗೆ ಬರಬೇಕಾಗಿದ್ದ ಪ್ರಯಾಣಿಕರೊಬ್ಬರ ಜತೆ ಜೆಟ್ ಏರ್‍ವೇಸ್ ಸಿಬ್ಬಂದಿ ಕಿರಿಕ್

ಈ ಸುದ್ದಿಯನ್ನು ಶೇರ್ ಮಾಡಿ

Jet-Airways
ಬೆಂಗಳೂರು, ಜೂ.19- ಕೆಲ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುತ್ತಿರುವ ದೂರುಗಳು ಇರುವಾಗಲೇ ಮತ್ತೆ ಪ್ರಕರಣವೊಂದು ಮತ್ತೆ ಬೆಳಕಿಗೆ ಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಬರಬೇಕಾಗಿದ್ದ ಪ್ರಯಾಣಿಕರೊಬ್ಬರ ಜತೆ ಜೆಟ್ ಏರ್‍ವೇಸ್ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿ ದಬ್ಬಾಳಿಕೆ ನಡೆಸಿರುವ ಘಟನೆ ನಡೆದಿದ್ದು, ಈ ಬಗ್ಗೆ ಈಗ ಮುಂಬೈನ ಸಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ವಿವರ:

ಬೆಂಗಳೂರಿನ ಕಾರ್ಪೊರೇಟ್  ಸಂಸ್ಥೆಯೊಂದರ ಅಧಿಕಾರಿಯಾಗಿರುವ ಹರ್ಮಿತ್‍ಸಿಂಗ್ ಎಂಬುವವರು ಜೆಟ್ ಏರ್‍ವೇಸ್‍ನಲ್ಲಿ ಮುಂಬೈಗೆ ತೆರಳಿ ನಂತರ ಮರಳುವ ಟಿಕೆಟ್ ಕಾಯ್ದಿರಿಸಿದ್ದರು. ಅದರಂತೆ ಸೋಮವಾರ ಸಂಜೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಟ್ ಏರ್‍ವೇಸ್‍ನಲ್ಲಿ ಪ್ರಯಾಣ ಬೆಳೆಸಿ ರಾತ್ರಿ 11.40ಕ್ಕೆ ಮುಂಬೈನ ಛತ್ರಪತಿ ವಿಮಾನ ನಿಲ್ದಾಣಕ್ಕೆ ತಲುಪಿದರು. ನಂತರ ವಿಮಾನ ನಿಲ್ದಾಣದಲ್ಲೇ ತಮ್ಮ ಸ್ನೇಹಿತರೊಬ್ಬರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪುನಃ 3.05ಕ್ಕೆ ನಿರ್ಗಮನಕ್ಕೆ ತಯಾರಿ ನಡೆಸಿದ್ದರು.

ಮುಂಜಾನೆ 1.50ರ ಸಂದರ್ಭದಲ್ಲಿ ಸ್ವಯಂಚಾಲಿತ ಟಿಕೆಟ್ ಮುದ್ರಿಸಿಕೊಳ್ಳುವ ಯಂತ್ರದ ಬಳಿ ಟಿಕೆಟ್ ಮುದ್ರಿಸಲು ಹೋದಾಗ ಅದು ಸಾಧ್ಯವಾಗಲಿಲ್ಲ. ನಂತರ ಕೆಲವೇ ಕ್ಷಣಗಳಲ್ಲಿ 2.05ರ ಹೊತ್ತಿಗೆ ಜೆಟ್ ಏರ್‍ವೇಸ್‍ನ ಕೌಂಟರ್ ಬಳಿ ನಿಂತು ಬೋರ್ಡಿಂಗ್ ಪಾಸ್ ಪಡೆಯಲು ಪ್ರಯತ್ನಿಸಿದ್ದಾರೆ.ಆದರೆ, ಜೆಟ್‍ಏರ್‍ವೇಸ್ ಸಿಬ್ಬಂದಿಗಳು ಮತ್ತೊಬ್ಬ ಪ್ರಯಾಣಿಕರ ಜತೆಗೆ ಜಗಳವಾಡುತ್ತಿದ್ದರಿಂದ 10 ರಿಂದ 15 ನಿಮಿಷ ಕಾಲ ಕಳೆದಿತ್ತು. ಅಲ್ಲಿದ್ದ ಸಿಐಎಸ್‍ಎಫ್‍ನ ಭದ್ರತಾ ಸಿಬ್ಬಂದಿಗಳು ಕೂಡ ಏನೂ ಮಾಡದ ಪರಿಸ್ಥಿತಿಯಲ್ಲಿ ನಿಂತು ನೋಡುತ್ತಿದ್ದರು.

ಕೊನೆಗೆ 2.15 ರಿಂದ 2.17ರ ಸಂದರ್ಭದಲ್ಲಿ ಜೆಟ್‍ಏರ್‍ವೇಸ್ ಸಿಬ್ಬಂದಿಗಳ ಬಳಿ ಬೋರ್ಡಿಂಗ್ ಪಾಸ್ ಕೇಳಿದಾಗ, ಈಗಾಗಲೇ ಸೀಟುಗಳು ಭರ್ತಿಯಾಗಿವೆ. ಏನು ಮಾಡಲು ಸಾಧ್ಯವಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.ಇದರಿಂದ ವಿಚಲಿತರಾದ ಹರ್ಮಿತ್‍ಸಿಂಗ್ ಅವರು ತಮ್ಮ ಬಳಿ ಇದ್ದ ಪ್ರಿಂಟೌಟ್ ದಾಖಲೆಗಳನ್ನು ತೋರಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವುದು ಸರಿಯಲ್ಲ ಎಂದು ಪ್ರಶ್ನಿಸಿದಾಗ, ಆಕ್ರೋಶಗೊಂಡ ವಿಮಾನಯಾನ ಸಿಬ್ಬಂದಿಗಳು ನೀವು ಏನು ಬೇಕಾದರೂ ಮಾಡಿಕೊಳ್ಳಿ, ಯಾರಿಗೆ ಬೇಕಾದರೂ ದೂರು ಕೊಡಿ. ನಾವು ಹೆದರುವುದಿಲ್ಲ. ಬೇಕಾದದ್ದು ಮಾಡಿಕೊಳ್ಳಿ ಎಂದು ನಿಂದಿಸಿದ್ದಾರೆ.

ಇದರಿಂದ ನೊಂದ ಹರ್ಮಿತ್‍ಸಿಂಗ್ ಅವರು ನೇರವಾಗಿ ವಿಮಾನ ನಿಲ್ದಾಣದ ಬಳಿ ಇರುವ ಸಹಾರ್ ಪೊಲೀಸ್ ಠಾಣೆಯಲ್ಲಿ ಜೆಟ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸುವಂತಹ ಇಂತಹ ವಿಮಾನಯಾನ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮೊದಲೇ ನಾನು ಟಿಕೆಟ್ ಕಾಯ್ದಿರಿಸಿದ್ದರೂ ಪ್ರಯೋಜನವಾಗಿಲ್ಲ. ನನ್ನ ಹಣ ಹಾಗೂ ಸಮಯವೂ ನಷ್ಟವಾಗಿದೆ. ಜೆಟ್‍ಏರ್‍ವೇಸ್ ಸಿಬ್ಬಂದಿಗಳು ಮಾನಸಿಕವಾಗಿಯೂ ನನಗೆ ನೋವುಂಟುಮಾಡಿದ್ದಾರೆ. ಇಂತಹ ಪ್ರಕರಣಗಳ ವಿರುದ್ಧ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಕುರಿತಂತೆ ನಾನು ಸದ್ಯದಲ್ಲೇ ಗ್ರಾಹಕ ನ್ಯಾಯಾಲಯ ಹಾಗೂ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಹಾಗೂ ಸಚಿವರಿಗೂ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

Facebook Comments

Sri Raghav

Admin