ರಸ್ತೆಗುಂಡಿ ಮುಚ್ಚಲು ಬೆಂಗಳೂರಿಗೆ ಬಂತು ಜೆಟ್ ಪ್ಯಾಚರ್ಸ್ ಯಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.8- ನಗರದಲ್ಲಿ ಹಾಳಾಗಿರುವ ರಸ್ತೆಗಳ ಗುಂಡಿ ಮುಚ್ಚಲು ಜೆಟ್ ಪ್ಯಾಚರ್ಸ್ ಯಂತ್ರಗಳನ್ನು ಬಳಸಲು ಬಿಬಿಎಂಪಿ ತೀರ್ಮಾನಿಸಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ವಾರ್ಡ್‍ನಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ಸ್ ಯಂತ್ರಗಳ ಮೂಲಕ ರಸ್ತೆ ಗುಂಡಿ ಮುಚ್ಚುವ ಕಾರ್ಯ ಕೈಗೊಳ್ಳಲಾಗಿದ್ದು, ಮೇಯರ್ ಗೌತಮ್‍ಕುಮಾರ್ ಹಾಗೂ ಉಪಮೇಯರ್ ಮೋಹನ್‍ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗೌತಮ್‍ಕುಮಾರ್ ಮಾತನಾಡಿ, ಜೆಟ್ ಪ್ಯಾಚರ್ಸ್ ಯಂತ್ರದಿಂದ ಕೋಲ್ಡ್ ಟಾರ್ ಬಳಕೆ ಮಾಡಿ ರಸ್ತೆ ಗುಂಡಿ ಮುಚ್ಚಿದ್ದೇವೆ. ಈ ಯಂತ್ರ ಬಿಬಿಎಂಪಿಗೆ ಸೂಕ್ತವಾಗಿದೆ. ಈ ಹಿಂದೆ ಪೈತಾನ್ ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚುತ್ತಿದ್ದೆವು ಎಂದು ಹೇಳಿದರು.

ಪೈತಾನ್ ಯಂತ್ರದಲ್ಲಿ ಹಾಟ್‍ಮಿಕ್ಸ್ ಟಾರ್ ಬಳಕೆ ಮಾಡಿ ರಸ್ತೆ ಗುಂಡಿ ಮುಚ್ಚಲಾಗುತ್ತಿತ್ತು. ಆ ಯಂತ್ರಗಳು ಮಳೆಗಾಲಕ್ಕೆ ಸೂಕ್ತವಾಗಿರಲಿಲ್ಲ. ಆದರೆ, ಈಗ ಬಂದಿರುವ ಜೆಟ್ ಪ್ಯಾಚರ್ಸ್ ಯಂತ್ರ ಎಲ್ಲ ಕಾಲಗಳಿಗೂ ಸೂಕ್ತವಾಗಿದೆ. ಯಾವ ಸಂದರ್ಭದಲ್ಲೂ ರಸ್ತೆ ಗುಂಡಿ ಮುಚ್ಚಬಹುದಾಗಿದೆ ಎಂದು ಹೇಳಿದರು.

ದೊಮ್ಮಲೂರಿನಲ್ಲಿ ಬೃಹದಾಕಾರದ ರಸ್ತೆ ಗುಂಡಿಯನ್ನು ಕೇವಲ 20 ನಿಮಿಷಗಳಲ್ಲಿ ಜೆಟ್ ಪ್ಯಾಚರ್ಸ್ ಮೂಲಕ ಮುಚ್ಚಲಾಗಿದೆ. ಹಾಗಾಗಿ ಇನ್ನು ಮುಂದೆ ರಸ್ತೆ ಗುಂಡಿ ಮುಚ್ಚಲು ಜೆಟ್ ಪ್ಯಾಚರ್ಸ್ ಬಳಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.

Facebook Comments