ಹಾಡಹಗಲೇ ಮಹಿಳೆ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ದೋಚಿದ ಖದೀಮ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಡಿ.14- ಮನೆ ಮುಂದೆ ಕುಳಿತು ಮಹಿಳೆಯೊಬ್ಬರು ಅವರೆ ಕಾಯಿ ಸುಲಿಯುವಾಗ ಅಪರಿಚಿತ ಯುವಕನೊಬ್ಬ ಬಂದು ತಲೆ ಮೇಲೆ ಹುಳ ಓಡಾಡುತ್ತಿದೆ ಎಂದು ಅವರ ತಲೆ ಮೇಲೆ ಕೈಯಾಡಿಸಿದ ಕೂಡಲೇ ಮಹಿಳೆ ಮೂರ್ಛೆ ಹೋದಾಗ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ, ಉಂಗುರ ಸೇರಿದಂತೆ 5 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಿಲಕ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಗವಿರಂಗ ಕಲ್ಯಾಣ ಮಂಟಪದ ಹಿಂಭಾಗದಲ್ಲಿ ನಡೆದಿದೆ.

ವಿಜಯಣ್ಣ ಅವರ ಪತ್ನಿ ವಿಜಯಲಕ್ಷ್ಮಿ (45) ಚಿನ್ನಾರಭರಣ ಕಳೆದುಕೊಂಡವರು. ವಿಜಯಲಕ್ಷ್ಮಿ ಅವರು ಮನೆ ಮುಂದೆ ಬೆಳಿಗ್ಗೆ 11 ಗಂಟೆ ಸಂದರ್ಭದಲ್ಲಿ ಅವರೆ ಕಾಯಿ ಸುಲಿಯುವಾಗ 17 ವರ್ಷದ ಯುವಕನೊಬ್ಬ ಬಂದು ರೀ ನಿಮ್ಮ ತಲೆ ಮೇಲೆ ಅವರೆ ಹುಳ ಹೋಡಾಡುತ್ತಿದೆ ಎಂದು ಹತ್ತಿರ ಬಂದು ತಲೆಯ ಮೇಲೆ ಕೈಯಿಟ್ಟಿದ್ದಾನೆ. ಆಗ ವಿಜಯಲಕ್ಷ್ಮಿ ಅವರು ಕೂಡಲೇ ಅರೆ ಪ್ರಜ್ಞೆ ಸ್ಥಿತಿಗೆ ಹೋಗಿದ್ದಾರೆ.

ಈ ವೇಳೆ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ. ಮಧ್ಯಾಹ್ನ 3 ಗಂಟೆಯಲ್ಲಿ ಮನೆಯವರೆಲ್ಲಾ ಊಟ ಮಾಡುವಾಗ ವಿಜಯಲಕ್ಷ್ಮಿ ಅವರ ಕೊರಳಲ್ಲಿ ಚಿನ್ನಾಭರಣಗಳು ಕಾಣಿಸದೆ ಇದ್ದಾಗ ಅನುಮಾನಗೊಂಡು ಕೇಳಿದಾಗ ಯುವಕ ಬಂದು ಹೋಗಿದ್ದನ್ನು ತಿಳಿಸಿದ್ದಾರೆ. ತಕ್ಷಣ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಸಬ್ ಇನ್ಸ್‍ಪೆಕ್ಟರ್ ನವೀನ್ ಅವರ ಗಮನಕ್ಕೆ ತಂದಿದ್ದಾರೆ. ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ಮುನಿರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಬಂಧನಕ್ಕೆ ಜಯನಗರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಶೇಷಾದ್ರಿ, ತಿಲಕ್‍ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕಟರ್ ನವೀನ್, ಸೈಮನ್ ವಿಕ್ಟರ್, ಮುನಾವರ್ ಪಾಷ, ಶಾಂತರಾಜು ಸೇರಿದಂತೆ ಇತರರ ತಂಡ ರಚಿಸಿ ಆರೋಪಿ ಬಂಧನಕ್ಕೆ ತಂಡ ರಚಿಸಿದ್ದಾರೆ.

Facebook Comments