ಜ್ಯುವೆಲರಿ ಅಂಗಡಿ ದೋಚಿದ್ದ ಮೂವರ ಬಂಧನ
ಬೆಂಗಳೂರು, ಜ.21- ಚಿನ್ನಾಭರಣ ಅಂಗಡಿಗೆ ನುಗ್ಗಿ ಕಳ್ಳತನ ಮಾಡಿದ್ದ ಮೂವರನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 40.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 4.15 ಲಕ್ಷ ರೂ. ಹಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಬಿಖಾರಾಮ್ ದೇವಸಿ, ಅಮರ್ಸಿಂಗ್, ಉತ್ತಮ್ ರಾಣಾ ಬಂಧಿತರು.
ಕಳೆದ ಅ.29ರಂದು ಪ್ರವೀಣ್ ಜ್ಯುವೆಲರಿ ಅಂಗಡಿಯ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದರು.
ಇನ್ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಸಿಬ್ಬಂದಿ ಕಳೆದ ನವೆಂಬರ್ನಲ್ಲಿ ಆರೋಪಿಗಳಾದ ಬಿಖಾರಾಮ್ ದೇವಸಿ ಮತ್ತು ಅಮರ್ಸಿಂಗ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮತ್ತೊಬ್ಬ ಆರೋಪಿ ಉತ್ತಮ್ ರಾಣಾ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಿದ್ದಾರೆ.
ಆರೋಪಿಗಳಿಂದ 40.25 ಲಕ್ಷ ರೂ. ಬೆಲೆಯ 533 ಗ್ರಾಂ ತೂಕದ ಚಿನ್ನಾಭರಣ , 2 ಕೆ.ಜಿ ಬೆಳ್ಳಿ ಆಭರಣ, 4.15 ಲಕ್ಷ ಹಣ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳುವಲ್ಲಿ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.