ಜ್ಯುವೆಲರಿ ಶಾಪ್‍ನಲ್ಲಿ ಆಭರಣ ಕಳ್ಳತನ, ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ಚಿನ್ನಾಭರಣ ಅಂಗಡಿಯಲ್ಲಿ 1 ಕೆಜಿ 16 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 45 ಲಕ್ಷ ರೂ. ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ಉತ್ತಮ್ ದೋಲಾಯಿ (37) ಬಂಧಿತ ಆರೋಪಿ.

ಬೆಂಗಳೂರಿನ ಮೈಸೂರು ರಸ್ತೆ, ಕಸ್ತೂರಿ ಬಾ ನಗರದಲ್ಲಿ ಆರೋಪಿ ಉತ್ತಮ್ ದೋಲಾಯಿ ವಾಸವಾಗಿದ್ದುಕೊಂಡು ಕಳೆದ ಮೂರು ವರ್ಷಗಳಿಂದ ಕಬ್ಬನ್‍ಪೇಟೆಯ ಚಿನ್ನಾಭರಣಗಳ ಸಗಟು ವ್ಯಾಪಾರಿ ಎಸ್‍ಕೆ ಜ್ಯುವೆಲರ್ಸ್‍ನಲ್ಲಿ ಕೆಲಸಕ್ಕಿದ್ದನು.

ಈತ ಚಿನ್ನದ ಗಟ್ಟಿಯನ್ನು ಮಾಲೀಕರಿಂದ ಪಡೆದುಕೊಂಡು ಚಿನ್ನಾಭರಣಗಳನ್ನು ಮಾಡಿಸಿ ತಂದುಕೊಡುತ್ತಿದ್ದ. ಈ ಸಮಯದಲ್ಲಿ ಅಂಗಡಿ ಮಾಲೀಕರಿಗೆ ಗೊತ್ತಾಗದ ರೀತಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದುದಾಗಿ ಹೆಚ್ಚಿನ ತನಿಖೆಯಿಂದ ತಿಳಿದುಬಂದಿದೆ.

ಜೂ.8ರಂದು ಕಂಠೀರವ ಸ್ಟುಡಿಯೋ ಮುಖ್ಯರಸ್ತೆ ಬಳಿಯ ಜ್ಯುವೆಲರಿ ಶಾಪ್ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ಈತನು ಬಳಿ ಇಟ್ಟುಕೊಂಡಿದ್ದ ಚಿನ್ನಾಭರಣಗಳ ಬಗ್ಗೆ ವಿಚಾರಿಸಿದಾಗ ಸಮಂಜಸವಾದ ಉತ್ತರ ನೀಡದ ಕಾರಣ ಠಾಣೆಗೆ ಕರೆದೊಯ್ದು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.

Facebook Comments