ಇಬ್ಬರು ಸರಗಳ್ಳರ ಬಂಧನ, 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ನಗರದಲ್ಲಿ ಸುಲಿಗೆ ಮತ್ತು ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಉತ್ತರ ವಿಭಾಗದ ಯಶವಂತಪುರ ಠಾಣೆ ಪೊಲೀಸರು ಬಂಧಿಸಿ 2.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಯಶವಂತಪುರದ ದಾವೂದ್ ಇಬ್ರಾಹಿಂ (21) ಮತ್ತು ರೋಷನ್ (20) ಬಂಧಿತ ಆರೋಪಿಗಳಾಗಿದ್ದು, ಇವರಿಂದ 15 ಗ್ರಾಂ ತೂಕದ ಚಿನ್ನಾಭರಣ, ಆರು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ನ.18ರಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಜೆಪಿ ಪಾರ್ಕ್‍ನಲ್ಲಿರುವ ಬಿಬಿಎಂಪಿ ಜಿಮ್‍ಗೆ ಮಮತಾ ಸಿಂಗ್ ಎಂಬುವವರು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಇವರ ಕೊರಳಿಗೆ ಕೈ ಹಾಕಿ ಸರ ಕಿತ್ತುಕೊಳ್ಳಲು ಯತ್ನಿಸಿದ್ದರು. ಮಮತಾಸಿಂಗ್ ತಕ್ಷಣ ಎಚ್ಚೆತ್ತುಕೊಂಡು ಅವರನ್ನು ಹಿಡಿದು ಕೂಗಿಕೊಂಡಾಗ ಚೋರರು ತಲೆಗೆ ಗುದ್ದಿ ಅವರಿಂದ ಬಿಡಿಸಿಕೊಂಡು 20 ಗ್ರಾಂ ಸರ ಕಸಿದು ಪರಾರಿಯಾಗಿದ್ದರು.

ಈ ಬಗ್ಗೆ ಯಶವಂತಪುರ ಠಾಣೆ ಪೊಲೀಸರು ಸರಗಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದರು. ಇದೇ ದಿನ ಬೆಳಗಿನ ಜಾವ 4.30ರ ಸುಮಾರಿನಲ್ಲಿ ಯಶವಂತಪುರ ಎಸ್‍ಬಿಎಂ ಕಾಲೋನಿ, 8ನೆ ಮುಖ್ಯರಸ್ತೆಯಲ್ಲಿ ಕೆಲಸಕ್ಕೆ ಹೋಗಲು ದಿವ್ಯಶ್ರೀ ಎಂಬುವವರು ನಿಂತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಚೋರರು ಇವರ ಕೈಯಿಂದ ಮೊಬೈಲ್ ಕಿತ್ತುಕೊಂಡು ಹೋಗಿದ್ದರು.

ಸುಲಿಗೆ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ಈ ಎರಡೂ ಪ್ರಕರಣಗಳಲ್ಲಿ ಒಂದೇ ತಂಡದ ಕೈವಾಡವಿರುವ ಬಗ್ಗೆ ತನಿಖೆ ಕೈಗೊಂಡು ಕೊನೆಗೂ ಇಬ್ಬರನ್ನು ಬಂಧಿಸಿ ಮಾಲನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಯಶವಂತಪುರ ಠಾಣೆ ಇನ್ಸ್‍ಪೆಕ್ಟರ್ ಮಹಮ್ಮದ್ ಮುಕಾರಾಂ ಅವರ ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments