ಕೋವಿಡ್ನಿಂದ ಮೃತಪಟ್ಟ ವೃದ್ಧೆಯ ಚಿನ್ನ ಕದ್ದ ಕಳ್ಳರು ನಂತರ ಭಯದಿಂದ ಮಾಡಿದ್ದೇನು ಗೊತ್ತೇ..!
ಚಿಕ್ಕಮಗಳೂರು, ಆ.25- ಕೊರೊನಾ ಸೊಂಕಿನಿಂದ ಮೃತಪಟ್ಟಿದ್ದ ವೃದ್ಧೆಯೊಬ್ಬರ ಮಾಂಗಲ್ಯ ಸರ ಹಾಗೂ ಉಂಗುರವನ್ನು ಕೋವಿಡ್ ಆಸ್ಪತ್ರೆಯಲ್ಲಿ ಕಳ್ಳತನ ಮಾಡಲಾಗಿದೆ.
ಮೃತಪಟ್ಟ ಮಹಿಳೆಯ ಕುಟುಂಬಸ್ಥರು ಈ ಬಗ್ಗೆ ಆರೋಪ ಮಾಡಿದ್ದರು. ಈ ಬಗ್ಗೆ ಆರೋಗ್ಯ ಇಲಾಖೆಯ ಅಕಾರಿಗಳು ಲಿಖಿತವಾಗಿ ದೂರು ದಾಖಲಿಸದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ವೃದ್ಧೆಯೊಬ್ಬರು ಸೋಂಕು ತಗುಲಿದ ಪರಿಣಾಮ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ವಯೋಸಹಜವಾದ ಕಾಯಿಲೆಯಿಂದ ಬಳಲುತ್ತಿರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಆ.10ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಅವರನ್ನು ಅಂತ್ಯಸಂಸ್ಕಾರ ಮಾಡಿದ್ದರು. ಅವರ ಮೈಮೇಲಿದ್ದ 50ಗ್ರಾಂ. ಮಾಂಗಲ್ಯ ಸರ ಮತ್ತು ಒಂದು ಉಂಗುರ ವಾಪಸ್ ನೀಡಿರಲಿಲ್ಲ ಹೀಗಾಗಿ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಸರ್ಜನ್ಗೆ ದೂರು ನೀಡಿದರು.
# ಚಿನ್ನಾಭರಣ ವಾಪಸ್:
ಕೋವಿಡ್ ಆಸ್ಪತ್ರೆಯಲ್ಲಿ ಕಳ್ಳತನವಾಗಿರುವುದು ಆಸ್ಪತ್ರೆ ಸಿಬ್ಬಂದಿ, ಪೊಲೀಸರು, ಮೃತ ಕುಟುಂಬಸ್ಥರಲ್ಲಿ ಮಾತ್ರ ಈ ವಿಷಯ ಚರ್ಚೆಯಾಗಿತ್ತು. ಈ ವಿಷಯ ಹೇಗೋ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಬೆಳಕಿಗೆ ಬಂದ ತಕ್ಷಣ ಚಿನ್ನ ಕದ್ದವರು ಆಭರಣಗಳನ್ನು ಸರ್ಜನ್ ಮೋಹನ್ಕುಮಾರ್ ಅವರ ಕಚೇರಿಯಲ್ಲಿ ಇಟ್ಟು ಪರಾರಿಯಾಗಿದ್ದಾರೆ.
ಆದರೆ, ಬಂಗಾರವನ್ನು ಇಟ್ಟು ಹೋಗಿರುವುದು ಯಾರು ಎಂಬುದು ತಿಳಿದು ಬಂದಿರುವುದಿಲ್ಲ. ಕೂಡಲೇ ಈ ಬಗ್ಗೆ ತನಿಖೆ ಕೈಗೊಂಡು ಸಿಸಿಟಿವಿ ಮತ್ತಿತರ ರೀತಿಯಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ಸರ್ಜನ್ ಮೋಹನ್ ಕುಮಾರ್ ಜಿಲ್ಲಾ ಆರೋಗ್ಯ ಸಂಸ್ಥೆಗೆ ಕೆಟ್ಟ ಹೆಸರು ಬರುತ್ತದೆ ಎಂಬ ನಿಟ್ಟಿನಲ್ಲಿ ಆಭರಣವನ್ನು ಹಿಂತಿರುಗಿಸಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಭರಣವನ್ನು ವಾಪಸ್ ತಂದಿಟ್ಟಿದ್ದಾರೆ. ಯಾರು ಎಂದು ಗೊತ್ತಿಲ್ಲ.