ಲಸಿಕೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳವು..!

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕನಾಯಕನಹಳ್ಳಿ, ಜು.21- ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಮಾದಿಹಳ್ಳಿಜಗೆ ಸೇರಿದ ತೋಟದ ಮನೆಯಲ್ಲಿ ಕೋವಿಡ್ ಲಸಿಕೆ ನೀಡುವ ನೆಪದಲ್ಲಿ ಮಹಿಳೆಯ ಚಿನ್ನಾಭರಣ ಅಪಹರಿಸಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮನೆಯ ಮಾಲೀಕ ರವಿ ಎಂಬುವವರಿಗೆ ಫೋನ್ ಮಾಡಿದ್ದು, ನಾವು ಆರೋಗ್ಯ ಇಲಾಖೆ ಸಿಬ್ಬಂದಿ. ಕೋವಿಡ್ ಲಸಿಕೆ ಹಾಕಲು ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಆತ ತಾನು ಮನೆಯಲ್ಲಿಲ್ಲವೆಂದು ತಿಳಿಸಿದ್ದನ್ನು ಖಚಿತಪಡಿಸಿಕೊಂಡು ಈಗ ಮನೆಯಲ್ಲಿರುವವರಿಗೆ ಲಸಿಕೆ ಹಾಕುತ್ತೇವೆ. ನೀವು ಬಂದ ಮೇಲೆ ನಿಮಗೆ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿದ್ದ ರವಿ ಪತ್ನಿಗೆ ಈ ವಿಷಯ ತಿಳಿಸಿ, ಲಸಿಕೆ ಹಾಕುವಾಗ ಮೈಮೇಲೆ ಚಿನ್ನಾಭರಣ ಇರಬಾರದೆಂದು ಹೇಳಿ ಮಾಂಗಲ್ಯ ಸರ, ಓಲೆ, ಉಂಗುರವನ್ನು ತೆಗೆದಿರಿಸಿದ್ದಾರೆ. ಬಳಿಕ ಬಿಸಿ ನೀರು ಬೇಕೆಂದು ಕೇಳಿದ್ದಾರೆ.

ಮಹಿಳೆ ಬಿಸಿ ನೀರು ತರಲೆಂದು ಅಡುಗೆ ಮನೆಗೆ ಹೋದಾಗ ತೆಗೆದಿಟ್ಟಿದ್ದ ಚಿನ್ನಾಭರಣ ತೆಗೆದುಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ. ಮನೆ ಮಾಲೀಕ ರವಿ ಬಂದಾಗ ಪತ್ನಿ ವಿಷಯ ತಿಳಿಸಿದ್ದು, ಕೂಡಲೇ ಚಿಕ್ಕನಾಯಕನಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳ ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Facebook Comments