ಜಾರ್ಖಂಡ್‍ನಲ್ಲಿ ಭಾರೀ ಸ್ಫೋಟಕ ಪತ್ತೆ : ತಪ್ಪಿದ ನಕ್ಸಲರ ವಿದ್ವಂಸಕ ಕೃತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಡುಮ್ಕಾ, ಡಿ.5(ಪಿಟಿಐ)- ಜಾರ್ಖಂಡ್‍ನಲ್ಲಿ ಶನಿವಾರ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ನಕ್ಸಲ್ ಹಾವಳಿ ಇರುವ ಡುಮ್ಕಾ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ.

ಜಿಲ್ಲೆಯ ಗೋಪಿಕಾಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಕಿಬಾದ್ ಪ್ರದೇಶದ ಪರಿತ್ಯಕ್ತ ಕಲ್ಲು ಅರೆಯುವ ಕಾರ್ಖಾನೆಯಲ್ಲಿ 320 ಜಿಲೆಟಿನ್ ಕಡ್ಡಿಗಳು ಮತ್ತು 200 ಡಿಟೊನೇಟರ್‍ಗಳು ಪತ್ತೆಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಎಸ್.ರಮೇಶ್ ತಿಳಿಸಿದ್ದಾರೆ.

ಖಚಿತ ಸುಳುವಿನ ಮೇರೆಗೆ ಪೊಲೀಸ್ ಸಿಬ್ಬಂದಿ ಆ ಸ್ಥಳವನ್ನು ಪರಿಶೀಲಿಸಿದಾಗ ಈ ಸ್ಫೋಟಕ ಸಾಮಗ್ರಿಗಳು ಪತ್ತೆಯಾದವು. ವಿದ್ವಂಸಕ ಕೃತ್ಯ ಎಸಗಲಿ ನಕ್ಸಲರು ಇವುಗಳನ್ನು ಅಡಗಿಸಿಟ್ಟಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಡುಮ್ಕಾ ಜಿಲ್ಲೆಯಲ್ಲಿ 10ರಿಂದ 15 ನಕ್ಸಲ್ ತಂಡಗಳು ಸಕ್ರಿಯವಾಗಿವೆ ಎಂದು ಅವರು ತಿಳಿಸಿದ್ದಾರೆ. ಡಿ.7ರಂದು ಜಾರ್ಖಂಡ್‍ನ 20 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಹಂತ ಚುನಾವಣೆ ನಡೆಯಲಿದೆ.

Facebook Comments