ನಾಳೆ ಜಾರ್ಖಂಡ್ ಚುನಾವಣೆ : ಸಿಎಂ ರಘುವರ್ ದಾಸ್ ಸೇರಿ ಘಟಾನುಘಟಿಗಳ ಭವಿಷ್ಯ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

ರಾಂಚಿ, ಡಿ.6- ನಕ್ಸಲರ ದಾಳಿ ಆತಂಕದ ನಡುವೆಯೇ ನಾಳೆ ಜಾರ್ಖಂಡ್ ವಿಧಾನಸಭೆಯ ಎರಡನೇ ಹಂತದ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮುಖ್ಯಮಂತ್ರಿ ರಘುವರ್ ದಾಸ್ ಸೇರಿದಂತೆ ಕೆಲವು ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. 81 ಸದಸ್ಯ ಬಲದ ಜಾರ್ಖಾಂಡ್ ವಿಧಾನಸಭೆಗೆ ಶನಿವಾರ ನಡೆಯುವ ದ್ವಿತೀಯ ಹಂತದ ಚುನಾವಣೆಯಲ್ಲಿ 20 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನವಾಗಲಿದೆ.

ಮುಖ್ಯಮಂತ್ರಿ ರಘುವರ ದಾಸ್ ಜೆಮ್‍ಶೆಡ್‍ಪುರ್ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮಾಜಿ ಸಚಿವ ಸರಯು ರಾಯ್ ಮತ್ತು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಮುಖ್ಯಮಂತ್ರಿಗೆ ಎದುರಾಳಿಯಾಗಿದ್ದಾರೆ.

ನಾಳಿನ ಚುನಾವಣೆಯಲ್ಲಿ ಅನೇಕ ಘಟಾನುಘಟಿಗಳೂ ಸಹ ಕಣದಲ್ಲಿದ್ದಾರೆ. ವಿಧಾನಸಭಾಧ್ಯಕ್ಷ ದಿನೇಶ್ ಓರಾವೊನ್, ನಗರಾಭಿವೃದ್ಧಿ ಸಚಿವ ನೀಲಕಾಂತ್ ಸಿಂಗ್ ಮುಂಡಾ, ಜಲ ಸಂಪನ್ಮೂಲ ಸಚಿವ ರಾಮಚಂದ್ರ ಸಾಹಿ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥೆ ಲಕ್ಷಣ್ ಗುಲುವಾ ಅವರ ಹಣೆಬರಹ ಸಹ ನಾಳೆ ನಿರ್ಧಾರವಾಗಲಿದೆ.

ಮೊದಲ ಹಂತದ ಚುನಾವಣೆ ವೇಳೆ ನಕ್ಸಲರು ಸೇತುವೆಯೊಂದನ್ನು ಸ್ಫೋಟಿಸಿ ಆತಂಕ ಸೃಷ್ಟಿಸಿದ್ದರು. ನಿನ್ನೆಯಷ್ಟೇ ಡುಮ್ಕಾ ಜಿಲ್ಲೆಯಲ್ಲಿ ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಪೋಟಕಗಳನ್ನು ವಶಪಡಿಸಿಕೊಂಡಿದ್ದರು. ಮಾವೋವಾದಿಗಳ ದಾಳಿ ಆತಂಕದ ಹಿನ್ನೆಲೆ ಯಲ್ಲಿ ನಾಳಿನ ಚುನಾವಣೆಗೆ ಬಾರಿ ಬಂದೋಬಸ್ತ್ ಮಾಡಲಾಗಿದೆ.

Facebook Comments